ಇಸ್ರೋ ವಿಜ್ಞಾನಿಗಳ ಕೊಡುಗೆ ಅನನ್ಯ

24,kkr1(8-23
Published on

ಕಿಕ್ಕೇರಿ: ನಮ್ಮ ದೇಶದ ಕೀರ್ತಿ ವಿಶ್ವಮಾನ್ಯವಾಗಲು ಇಸ್ರೋ ವಿಜ್ಞಾನಿಗಳ ಕೊಡುಗೆ ಅನನ್ಯ ಎಂದು ಸಾಮಾಜಿಕ ಕಾರ್ಯಕರ್ತ ಹೊಳೆನರಸೀಪುರ ನಾರಾಯಣ ಬಣ್ಣಿಸಿದರು.


ಪಟ್ಟಣದಲ್ಲಿ ಸ್ಪಂದನಾ ಫೌಂಡೇಷನ್ ಗುರುವಾರ ಹಮ್ಮಿಕೊಂಡಿದ್ದ ಚಂದ್ರನ ಅಂಗಳದಲ್ಲಿ ಭಾರತದ ವಿಕ್ರಂ ಕಾರ್ಯಕ್ರಮದಲ್ಲಿ ಮಾತನಾಡಿ, ಚಂದ್ರನ ದಕ್ಷಿಣ ಕ್ಷಿತಿಜದಲ್ಲಿ ಭಾರತದ ಗಗನನೌಕೆ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿರುವುದು ವಿಶ್ವದಲ್ಲಿಯೇ ಪ್ರಥಮ ಸಾಧನೆಯಾಗಿದೆ. ಇತರ ನಾಲ್ಕು ರಾಷ್ಟ್ರಗಳು ಚಂದ್ರನಲ್ಲಿ ಉಪಗ್ರಹ ಇಳಿಸಿದ್ದರೂ ನಮ್ಮ ದೇಶದ ವಿಜ್ಞಾನಿಗಳು ದಕ್ಷಿಣ ಕ್ಷಿತಿಜದಲ್ಲಿ ಗಗನನೌಕೆ ಇಳಿಸಿರುವುದು ವಿಶ್ವದಲ್ಲಿಯೇ ಪ್ರಥಮವಾಗಿದೆ ಎಂದರು.


ವಿಜ್ಞಾನಿಗಳ ಪರಿಶ್ರಮ ಮೆಚ್ಚಬೇಕಿದೆ. ಭಾರತದ ಶ್ರೀಹರಿಕೋಟಾದಲ್ಲಿ ಜು.14ರಂದು ಉಡಾವಣೆಯಾಗಿ 40 ದಿನಗಳ ಸುದೀರ್ಘ ಪಯಣದಲ್ಲಿ ಚಂದ್ರನಲ್ಲಿ ಲ್ಯಾಂಡಿಂಗ್‌ಗಾಗಿ ಹಗಲಿರುಳು ವಿಜ್ಞಾನಿಗಳ ತಂಡ ಶ್ರಮಿಸಿದೆ. ವಿದ್ಯಾರ್ಥಿಗಳು ಇಂತಹ ಅದ್ಭುತ ಸಾಧನೆ ಮಾಡಲು ಬಾಲ್ಯದಿಂದಲೇ ಶ್ರದ್ಧೆಯ ಓದಿನೆಡೆಗೆ ಗಮನಹರಿಸಿ ಎಂದು ಕಿವಿಮಾತು ಹೇಳಿದರು.


ಟ್ರಸ್ಟಿ ತ್ರಿವೇಣಿ ಮಾತನಾಡಿ, ಮಕ್ಕಳಲ್ಲಿ ಬಾಹ್ಯಾಕಾಶದ ಕಿರು ಪರಿಚಯವಾಗಬೇಕಿದೆ. ಟಿವಿ, ಮೊಬೈಲ್ ಬದಲು ದಿನಕ್ಕೊಂದು ವಿಜ್ಞಾನಿಗಳ ಕಥೆ, ಸಾಧನೆಯ ಕುರಿತು ಕಿರು ಪರಿಚಯ ಮಾಡಿಕೊಟ್ಟರೆ ಸಾಕು ಅದ್ಭುತ ಲೋಕವನ್ನು ಮಕ್ಕಳು ಸೃಷ್ಟಿಸಲಿದ್ದಾರೆ ಎಂದರು.


ತ್ರಿವರ್ಣ ಧ್ವಜ ಹಿಡಿದು ಮಕ್ಕಳು ವಿಜ್ಞಾನಿಗಳ ಸಾಧನೆಯನ್ನು ಸ್ಮರಿಸಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.ಸಾಮಾಜಿಕ ಸೇವಾಕರ್ತರಾದ ಕವಿತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net