

ರಾಣೆಬೆನ್ನೂರ/ಬ್ಯಾಡಗಿ: ನೆರೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಆರೋಪ ಹಿನ್ನೆಲೆಯಲ್ಲಿ ರಾಣೆಬೆನ್ನೂರ ತಹಸೀಲ್ದಾರ್ ಬಸವನಗೌಡ ಕೋಟೂರು ಸೇರಿ ಆರು ಜನರ ವಿರುದ್ಧ ಹಾಗೂ ಬ್ಯಾಡಗಿಯ ತಹಸೀಲ್ದಾರ್ ಶರಣಮ್ಮ ಕಾರಿ ಮತ್ತು ತಾಲೂಕಿನ ವಿವಿಧ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ದೂರು ದಾಖಲಿಸಿದ್ದಾರೆ.
ರಾಣೆಬೆನ್ನೂರಲ್ಲಿ: ಸಹಾಯಕ ಕೃಷಿ ನಿರ್ದೇಶಕ ಎಂ.ಬಿ. ಗೌಡಪ್ಪಳವರ, ತೋಟಗಾರಿಕೆ ಇಲಾಖೆ ಹಿರಿಯ ಉಪ ನಿರ್ದೇಶಕ ನೂರಅಹ್ಮದ್ ಹಲಗೇರಿ, ತಹಸೀಲ್ದಾರ್ ಕಚೇರಿಯ ಡಾಟಾ ಎಂಟ್ರಿ ಆಪರೇಟರ್, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕ ವಿರುದ್ಧ ದೂರು ದಾಖಲಾಗಿದೆ.
ಇವರು ತಾಲೂಕಿನ ಅನರ್ಹ ಫಲಾನುಭವಿಗಳಿಗೆ ಬೆಳೆಹಾನಿ ಪರಿಹಾರ ಮಂಜೂರು ಮಾಡಿದ್ದಾರೆ. ಡಾಟಾ ಆಪರೇಟರ್ಗಳು ಲಾಗಿನ್ ಐಡಿ ಬಳಸಿ ಕಾನೂನು ಸಮ್ಮತವಲ್ಲದ ವ್ಯಕ್ತಿಗಳಿಗೆ ಪರಿಹಾರ ನೀಡಿ ಸರ್ಕಾರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
838ಕ್ಕೂ ಅಧಿಕ ಪ್ರಕರಣದಲ್ಲಿ ಗೋಲ್ವಾಲ್: ರಾಣೆಬೆನ್ನೂರ ತಾಲೂಕಿನ 838ಕ್ಕೂ ಅಧಿಕ ಪ್ರಕರಣದಲ್ಲಿ ಗೋಲ್‍ಮಾಲ್ ಮಾಡಿ ಹಣ ಪಾವತಿಯಾಗಿರುವುದು ಕಂಡುಬಂದಿದೆ. ಸರ್ಕಾರದ ನಿಯಮಾವಳಿ ಪ್ರಕಾರ ನೆರೆ ಸಂತ್ರಸ್ತರ ಕುರಿತು ಸಮಗ್ರ ಮಾಹಿತಿಯನ್ನು ಪರಿಹಾರ ಸಾಫ್ಟ್ವೇರ್ಗೆ ಅಪ್ಲೋಡ್ ಮಾಡಿದ ಬಳಿಕ ‘ಮ್ಯಾಚ್ ಸ್ಕೋರ್-1.5’ ಎಂದು ಬರುತ್ತದೆ. ಅಂತಹ ಫಲಾನುಭವಿಗೆ ಪರಿಹಾರ ನೀಡಬಹುದು. ಆದರೆ ರಾಣೆಬೆನ್ನೂರಿನಲ್ಲಿ ‘ಮ್ಯಾಚ್ ಸ್ಕೋರ್-0’ ಎಂದು ಬಂದವರಿಗೂ ಹಣ ಬಿಡುಗಡೆ ಮಾಡಲಾಗಿದೆ. ‘ಮ್ಯಾಚ್ ಸ್ಕೋರ್-0’ ಎಂದು ಬಂದಾಗ ಅಥವಾ ‘ಮ್ಯಾಚ್ ಸ್ಕೋರ್-1.5’ ಎಂದು ಬಂದಾಗ ಅದನ್ನು ಮರು ಪರಿಶೀಲನೆಗೆ ಕಳುಹಿಸಬೇಕು. ಅದರ ಬದಲು ರಾಣೆಬೆನ್ನೂರಿನ ತಹಸೀಲ್ದಾರರು, ಗ್ರಾಮ ಲೆಕ್ಕಾಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಇದು ಅವ್ಯವಹಾರ ನಡೆಸಲು ಕಾರಣವಾಗಿದೆ. ಕಂಪ್ಯೂಟರ್ ಆಪರೇಟರ್ಗಳು ಬೇರೆಯವರ ಆಧಾರ್ ಸಂಖ್ಯೆ ಹಾಗೂ ಖಾತೆಗೆ ಹಣ ಮಂಜೂರು ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ದೂರಿನಲ್ಲಿ ತಿಳಿಸಿದ್ದಾರೆ.
ಕೃಷಿ, ತೋಟಗಾರಿಕೆ ಅಧಿಕಾರಿಗಳ ವಿರುದ್ಧದ ಆರೋಪ: ಎರೇಕುಪ್ಪಿ ಗ್ರಾಮದ ರೈತ ಮಂಜುನಾಥ ಎಂಬುವರು, ‘ನಮ್ಮ 4.5 ಎಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಸಂಪೂರ್ಣ ಹಾಳಾಗಿದೆ. ಪಕ್ಕದ ರೈತನದ್ದು 2 ಎಕರೆ ಹಾಳಾಗಿದೆ. ಆತನಿಗೆ 27 ಸಾವಿರ ರೂ. ಪರಿಹಾರ ಬಂದಿದೆ. ನನಗೆ 13 ಸಾವಿರ ರೂ. ಪರಿಹಾರ ಬಂದಿದೆ. ನನಗೆ ಆಗಿರುವ ಅನ್ಯಾಯವನ್ನು ನೀವೇ ಸರಿಪಡಿಸಿಕೊಡಬೇಕು’ ಎಂದು ಮನವಿ ಮಾಡಿದ್ದಾರೆ. ಜೋಯಿಸರಹರಳಹಳ್ಳಿಯ ಶಿವಪ್ಪ ಮುದಿಹಾಳ ಎಂಬುವರ ಸರವಂದ ಗ್ರಾಮದ ಸರ್ವೆ ನಂ. 82/2ಅ ನಲ್ಲಿಯ 1.33 ಎಕರೆ ಹಾಗೂ ತಿರುಮಲದೇವರಕೊಪ್ಪ ಸರ್ವೆ ನಂ. 37/2ಪ್ಲಸ್2ಬ/2/1 ರಲ್ಲಿ 2.28 ಎಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಹಾಳಾಗಿ 2,28,000 ರೂ. ನಷ್ಟವಾಗಿದೆ. ಆದರೆ ಜಿಪಿಎಸ್ ಮಾಡುವವರು 13,439 ರೂ. ಪರಿಹಾರ ಬರುವಂತೆ ಮಾಡಿ ಮೋಸ ಮಾಡಿದ್ದಾರೆ. ಈ ಪ್ರಕರಣದಲ್ಲಿ ಸರಿಯಾಗಿ ಸರ್ವೆ ಮಾಡಿ ಹಾನಿಯ ಪ್ರತಿಶತ ಅಂದಾಜು ಮಾಡದೇ ತಪ್ಪು ಮಾಡಿದ್ದಾರೆ. ಇದರಿಂದಾಗಿ ಕೆಲವೆಡೆ ಪಕ್ಕದ ಜಮೀನಿನಲ್ಲಿ ಅರ್ಧ ವ್ಯಾಪ್ತಿಗೆ ಹಾಗೂ ಮತ್ತೊಂದೆಡೆ ಪೂರ್ಣ ವ್ಯಾಪ್ತಿಗೆ ಕಡಿಮೆ ಪರಿಹಾರ ನೀಡಿದ್ದು ಕಂಡು ಬಂದಿದೆ. ಆದ್ದರಿಂದ ಈ ಕುರಿತು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಪಹಣಿ ಕಾಲಂ ನಂಬರ್-9ರಲ್ಲಿ ಸ್ವಾಧೀನದಾರರ ಹೆಸರು ಸರ್ಕಾರ ಎಂದು ಇದ್ದರೂ ಸಹ ಇನ್ನೊಬ್ಬರ ಹೆಸರಿನ ಆಧಾರ್ ಸಂಖ್ಯೆಯನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿ ಹಣ ಮಂಜೂರು ಮಾಡಿಕೊಳ್ಳಲಾಗಿದೆ. ರಾಣೆಬೆನ್ನೂರ ತಾಲೂಕಿನ ಕುದರಿಹಾಳ ಗ್ರಾಮದ ಸರ್ವೆ ನಂ. 58 ಮತ್ತು ಹಿಲದಹಳ್ಳಿ ಗ್ರಾಮದ ಸರ್ವೆ ನಂ. 87/1ಅ ನಲ್ಲಿ ಈ ರೀತಿಯಾಗಿದ್ದು ಇದರ ಬಗ್ಗೆ ತನಿಖೆ ನಡೆಸುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಬ್ಯಾಡಗಿ ತಾಲೂಕಿನಲ್ಲಿ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಅಕ್ರಮ ಆರೋಪದಡಿ ತಹಸೀಲ್ದಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ತೋಟಗಾರಿಕೆ ಸಹಾಯಕ ನಿರ್ದೇಶಕರು, ಗ್ರಾಮಲೆಕ್ಕಾಧಿಕಾರಿಗಳು, ನಿಯೋಜಿತ ಆಪರೇಟರ್ ಹಾಗೂ ಅನರ್ಹ ಫಲಾನುಭವಿಗಳ ವಿರುದ್ಧ ಮೇಲೆ ಅಪರ ಜಿಲ್ಲಾಧಿಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಸಿಪಿಐ ಭಾಗ್ಯವತಿ ಬಂಟೆ ನೇತೃತ್ವದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈವರೆಗೆ ಯಾರನ್ನೂ ಬಂಧಿಸಿಲ್ಲ.
ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ್ ಶರಣಮ್ಮ ಕಾರಿ, ‘ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಎಲ್ಲ ಗ್ರಾಮಲೆಕ್ಕಾಧಿಕಾರಿಗಳು, ಸಿಬ್ಬಂದಿ ಸಭೆ ನಡೆಸಿ ಸಂಬಂಧಿಸಿದ ಮಾಹಿತಿ ಪಡೆದಿರುವೆ. ತನಿಖೆ ಹಾಗೂ ವಿಚಾರಣೆ ನಡೆಯುವ ಹಿನ್ನೆಲೆಯಿಂದ ಯಾವುದೇ ಕಾರಣಕ್ಕೂ ಸಿಬ್ಬಂದಿ ಮೇಲಧಿಕಾರಿಗಳ ಗಮನಕ್ಕೆ ತಾರದೆ, ಅನುಮತಿ ಪಡೆಯದೆ, ರಜೆ ಹೋಗುವಂತಿಲ್ಲ ಎಂದು ಸೂಚಿಸಲಾಗಿದೆ. ಬ್ಯಾಡಗಿ ವ್ಯಾಪ್ತಿಯಲ್ಲಿ ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಒಟ್ಟು 90 ಮಿಸ್ವ್ಯಾಚ್ ಪ್ರಕರಣಗಳಿದ್ದು, ಇದರಲ್ಲಿ ಎಷ್ಟು ಅನರ್ಹ ರೈತ ಫಲಾನುಭವಿಗಳ ಅಥವಾ ಇತರೆಯವರ ಖಾತೆಗೆ ಜಮೆಯಾಗಿದೆ ಎಂಬುದರ ಮಾಹಿತಿ ಪಡೆಯುತ್ತಿರುವೆ. ಎಲ್ಲರೂ ತನಿಖೆಗೆ ಸಹಕರಿಸುವಂತೆ ತಿಳಿಸಲಾಗಿದೆ’ ಎಂದರು.