ಇನ್ನೂ ಕೈ ಸೇರದ ಪಠ್ಯಪುಸ್ತಕ

School Books
Published on

ಕಾರವಾರ: ಸರ್ಕಾರ ಶಾಲೆಗಳಲ್ಲಿ ಆನ್​ಲೈನ್, ಆಫ್​ಲೈನ್ ತರಗತಿ ಪ್ರಾರಂಭಿಸಲು ಮುಂದಾಗಿದೆ. ಈಗಾಗಲೇ ಶಿಕ್ಷಣ ಸಚಿವರು ಅದಕ್ಕೆ ಚಾಲನೆ ನೀಡಿದ್ದಾರೆ. ಆದರೆ, ಹೊಸ ಪಠ್ಯಪುಸ್ತಕ ಮಾತ್ರ ಇದುವರೆಗೂ ವಿದ್ಯಾರ್ಥಿಗಳ, ಶಿಕ್ಷಕರ ಕೈ ಸೇರಿಲ್ಲ. ಇದರಿಂದ ಹಳೆಯ ಪುಸ್ತಕವನ್ನೇ ನೆಚ್ಚಿಕೊಂಡು ಪಾಠ ಕಲಿಯಬೇಕಾದ ಪರಿಸ್ಥಿತಿ ಇದೆ.

ಕೋವಿಡ್ ಲಾಕ್​ಡೌನ್ ಕಾರಣ ಬಂದಾಗಿದ್ದ ಶಾಲೆಗಳ ಬಾಗಿಲು ಮತ್ತೆ ತೆರೆದಿವೆ. ಮಕ್ಕಳ ಸ್ವರ ಕೇಳದೇ ಇದ್ದರೂ ಶಿಕ್ಷಕರು ಬಂದು ಹೋಗುತ್ತಿದ್ದಾರೆ.

ಮೂರನೇ ಅಲೆಯ ಭಯದ ಕಾರಣ ಸದ್ಯಕ್ಕಂತು ಶಾಲೆಗಳಲ್ಲಿ ಭೌತಿಕ ತರಗತಿಗಳು ಮರು ಪ್ರಾರಂಭವಾಗುವ ಲಕ್ಷಣ ಕಾಣುತ್ತಿಲ್ಲ. ಆದರೆ, ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆ, ಆನ್​ಲೈನ್, ಆಫ್​ಲೈನ್ ಶಿಕ್ಷಣ, ಟಿವಿ ಮೂಲಕ ಶಿಕ್ಷಣ ನೀಡಲು ಮುಂದಾಗಿದೆ.

ಆನ್​ಲೈನ್ ಶಿಕ್ಷಣ ನೀಡಲು ಎಷ್ಟು ಮಕ್ಕಳ ಬಳಿ ಮೊಬೈಲ್ ಇದೆ, ಮೊಬೈಲ್ ಇದ್ದವರಿಗೆ ನೆಟ್ವರ್ಕ್ ಇದೆಯೇ..?, ಎಷ್ಟು ಮಕ್ಕಳ ಮನೆಯಲ್ಲಿ ಟಿವಿ ಇದೆ ಮುಂತಾದ ಮಾಹಿತಿಗಳನ್ನು ಇಲಾಖೆ ಕಲೆ ಹಾಕುತ್ತಿದೆ.

ಶೀಘ್ರದಲ್ಲಿ ಸರ್ಕಾರಿ ಶಾಲೆಗಳಿಂದಲೂ ಸಾದ್ಯವಾದಷ್ಟು ಮಕ್ಕಳಿಗೆ ಆನ್​ಲೈನ್ ಶಿಕ್ಷಣ ಪ್ರಾರಂಭಿಸುವ ಸಾಧ್ಯತೆಯೂ ಇದೆ. ಆದರೆ, ಇದೆಲ್ಲದಕ್ಕೂ ಪಠ್ಯ ಪುಸ್ತಕದ್ದೇ ಸಮಸ್ಯೆಯಾಗಿದೆ.

ಬುಕ್ ಬ್ಯಾಂಕ್ ಆಧಾರ: ಜಿಲ್ಲೆಯ ಎರಡು ಶೈಕ್ಷಣಿಕ ಜಿಲ್ಲೆಯಲ್ಲಿ (ಶಿರಸಿ, ಕಾರವಾರ) 10 ಲಕ್ಷಕ್ಕೂ ಅಧಿಕ ಪುಸ್ತಕಕ್ಕೆ ಇಂಡೆಂಟ್ ಕಳಿಸಲಾಗಿದೆ. ಆದರೆ, ಕೋವಿಡ್ ಕಾರಣ ಪುಸ್ತಕ ಮುದ್ರಣ ವಿಳಂಬವಾಗಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ತಲುಪುವುದು ಇನ್ನು ತಿಂಗಳುಗಳೇ ಆಗಬಹುದು. ಈ ಸಮಸ್ಯೆಯನ್ನು ಬಗೆಹರಿಸಲು ಶಿಕ್ಷಕರು ಬುಕ್ ಬ್ಯಾಂಕ್ ಮೊರೆ ಹೋಗಿದ್ದಾರೆ. ಕಳೆದ ಬಾರಿ ಉಚಿತವಾಗಿ ಪುಸ್ತಕ ಪಡೆದ ಎಲ್ಲ ವಿದ್ಯಾರ್ಥಿಗಳಿಂದ ಅದನ್ನು ವಾಪಸ್ ಪಡೆದು ಶಾಲೆಯಲ್ಲಿ ಸಂಗ್ರಹಿಸಿದ್ದಾರೆ. ಹೊಸದಾಗಿ ದಾಖಲಾದ ಎಲ್ಲ ವಿದ್ಯಾರ್ಥಿಗಳಿಗೆ ಅದನ್ನೇ ವಿತರಣೆ ಮಾಡಲಾಗುತ್ತಿದೆ ಎನ್ನುತ್ತಾರೆ ಕಾರವಾರ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಹರೀಶ ಗಾಂವಕರ್.

ಈ ಹಿಂದಿನಿಂದಲೇ ಈ ವ್ಯವಸ್ಥೆಯನ್ನು ನಾವು ರೂಢಿಗೆ ತಂದಿದ್ದೆವು. ಪುಸ್ತಕ ವಿತರಣೆ ವಿಳಂಬವಾದಾಗ, ನೆರೆಯಲ್ಲಿ ಕೆಲವರು ಪುಸ್ತಕ ಕಳೆದುಕೊಂಡಾಗ ಈ ಬ್ಯಾಂಕ್ ನೆರವಿಗೆ ಬಂದಿದೆ ಎಂದು ವಿವರಿಸಿದ್ದಾರೆ.

ಎಸ್​ಎಸ್​ಎಲ್​ಸಿ ಹೊರತುಪಡಿಸಿ ಉಳಿದೆಲ್ಲ ವಿದ್ಯಾರ್ಥಿಗಳು ಉತ್ತೀರ್ಣ ಎಂದು ಸರ್ಕಾರ ಘೊಷಿಸಿದೆ. ಇದರಿಂದ ಆ ಎಲ್ಲ ವಿದ್ಯಾರ್ಥಿಗಳಿಗೆ ಕಳೆದ ವರ್ಷ ಉಚಿತವಾಗಿ ನೀಡಿದ ಪುಸ್ತಕವನ್ನು ವಾಪಸ್ ಪಡೆಯಲು ಸೂಚಿಸಲಾಗಿದೆ. ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಅದನ್ನು ನೀಡಲಾಗುತ್ತಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆ ಮುಗಿದ ನಂತರ ಆ ವಿದ್ಯಾರ್ಥಿಗಳ ಪುಸ್ತಕವನ್ನೂ ವಾಪಸ್ ಪಡೆದು, ಈಗಿನ ಬ್ಯಾಚ್​ಗೆ ಹಸ್ತಾಂತರಿಸಲಾಗುವುದು. ಇದರಿಂದ ಹೊಸ ಪುಸ್ತಕ ವಿತರಣೆ ವಿಳಂಬವಾಗಿದ್ದರೂ ಕಲಿಕೆಗೆ ಯಾವುದೇ ತೊಡಕಾಗುತ್ತಿಲ್ಲ.ದಿವಾಕರ ಶೆಟ್ಟಿ ಡಿಡಿಪಿಐ ಶಿರಸಿ

ಬೇಡಿಕೆ ಎಷ್ಟು..?

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 1365 ಶಾಲೆಗಳಿಂದ 1,38,122 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಖರೀದಿಗಾಗಿ 66,987 ಪುಸ್ತಕಗಳಿಗಾಗಿ, ಆರ್​ಟಿಇ ಅಡಿ 9,79,16 ಪುಸ್ತಕಗಳಿಗಾಗಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 2633 ಶಾಲೆಗಳಿಂದ, 6,85000 ಉಚಿತ ವಿತರಣೆ ಪುಸ್ತಕ, 1,88,081 ಖರೀದಿ ಪುಸ್ತಕಗಳಿಗಾಗಿ ಬೇಡಿಕೆ ಸಲ್ಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net