

ಬಾಗಲಕೋಟೆ: ಬಿಜೆಪಿ ಸರ್ಕಾರ ರಾಜ್ಯದ ಖಜಾನೆ ಲೂಟಿ ಹೊಡೆದಿದೆ. ತರಾತುರಿಯಲ್ಲಿ ಟೆಂಡರ್ ಕರೆಯುವ ಮೂಲಕ ಕಮಿಷನ್ ಪಡೆಯುತ್ತಿದೆ. ಜನ ಬಿಜೆಪಿ ಸರ್ಕಾರ ಕಿತ್ತೊಗೆಯಲಿದ್ದು, ಮುಂಬರುವ ಚುನಾವಣೆಯಲ್ಲಿ ೧೩೦-೧೫೦ ಸೀಟುಗಳೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಬಾದಾಮಿ ಶಾಸಕ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಕಾನಿಪ ಸಂಘದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಜೆಪಿ ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಿದರು. ಕರ್ನಾಟಕದಲ್ಲಿ ಎಂದೆಂದೂ ಕೇಳರಿಯದೇ ಭ್ರಷ್ಟ ಸರ್ಕಾರ ಇದೆ. ಸುಪ್ರೀಂಕೋರ್ಟ್ ನ್ಯಾಯಾಧೀಶರಿಂದ ೨೦೦೮ ರಿಂದ ಇಲ್ಲಿವರೆಗೆ ಎಲ್ಲ ತನಿಖೆ ಮಾಡಿ ಎಂದು ಬಗ್ಗೆ ಸದನದಲ್ಲಿ ಧ್ವನಿ ಎತ್ತಿದರೂ ತನಿಖೆ ಮಾಡುತ್ತಿಲ್ಲ. ನಾ ತಿನ್ನಲ್ಲ, ತಿನ್ನಲು ಬಿಡಲ್ಲ ಎನ್ನುವ ಮೋದಿ ಈ ವಿಚಾರದಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಿಎಂ ಪುತ್ರ ಹಗರಣದಲ್ಲಿದ್ದಾರೆ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ಎಚ್.ವಿಶ್ವನಾಥ ಹೇಳಿದ್ದಾರೆ. ಇಷ್ಟಾದರೂ ಸಮ್ಮನಿರುವುದು ಏಕೆ? ಕೆ.ಎಸ್.ಈಶ್ವರಪ್ಪಗೆ ಕಮಿಷನ್ ಕೊಡಲು ಆಗದೆ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡ. ಡೆತ್‌ನೋಟ್ ಬರೆದಿಟ್ಟ. ಇದೇ ರೀತಿ ಮೂರು ಜನ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಓರ್ವ ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ್ದರು. ಇವೆಲ್ಲ ದಾಖಲೆ ಅಲ್ವಾ? ಮಾನ ಮರ್ಯಾದೆ ಇದ್ದರೆ ಕೂಡಲೇ ತನಿಖೆ ಮಾಡಬೇಕಿತ್ತು. ಆದರೆ, ಇವರು ಲಜ್ಜೆಗೆಟ್ಟವರು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.