

ಬಾಗಲಕೋಟೆ: ದೇಶದ ಪರಿಸ್ಥಿತಿ ಅರ್ಥವಾಗಬೇಕಾದರೆ ಇತಿಹಾಸ ಅರಿಯಬೇಕಿದೆ. ವೈದಿಕ ಪದ್ಧತಿಯನ್ನು ವಿರೋಽಸಿ ಹುಟ್ಟಿಕೊಂಡಿದ್ದೇ ಶರಣ ಚಳುವಳಿ ಎಂದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಹಮ್ಮಿಕೊಂಡಿರುವ ಅನುಭವ ಮಂಟಪ - ಬಸವಾದಿ ಶರಣರ ವೈಭವ-೨೦೨೫ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ-ವರ್ತಮಾನ ಜರೂರು ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಮ್ಮ ಸಮಾಜದಲ್ಲಿ ಚತುರವರ್ಣ ಸಮಸ್ಯೆ ಇನ್ನೂ ಜೀವಂತವಾಗಿದೆ. ಭಂಗಿ ಹಾಗೂ ಪೌರೋಹಿತ್ಯ ಮಾಡುವವರು ಯಾವ ವರ್ಣದವರು? ಈ ವರ್ಣಗಳು ಏಕೆ ಪಲ್ಲಟವಾಗುತ್ತಿಲ್ಲ ಎನ್ನುವುದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ ಎಂದು ಮಾರ್ಮಿಕವಾಗಿ ನುಡಿದರು.
ಸಾಹಿತಿ ಡಾ. ವಿಕ್ರಂ ವಿಸಾಜಿ ಮಾತನಾಡಿ, ಬಸವಣ್ಣ ಹುಟ್ಟುವುದಕ್ಕಿಂತ ಮುಂಚೆ ದೇವರು ಮನುಷ್ಯನನ್ನು ಹುಟ್ಟಿಸಿದ್ದ ಎಂದು ಹೇಳಲಾಗುತ್ತಿತ್ತು. ಆದರೆ, ಬಸವಣ್ಣ ಬಂದ ನಂತರ ಮನುಷ್ಯರು ದೇವರನ್ನು ಸೃಷ್ಟಿಸುವವರು ಅಂತ ಪ್ರತಿಪಾದಿಸಿದರು. ಶೋಷಿತರಿಗೆ ಇದರಿಂದ ಅರಿವಿನ ಬೆಳಕು ಮೂಡಿತು. ಕಾರ್ಯಕದ ಮಹತ್ವ ಅರಿಯಲು ಸಾಧ್ಯವಾಯಿತು. ಕನ್ನಡದಲ್ಲಿ ಮೂಡಿದ ಬಂದ ವಚನ ಸಾಹಿತ್ಯ ಯುವ ಜನಾಂಗ ಓದಿ ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಬಸವಣ್ಣ ಕೇವಲ ರಾಜ್ಯದ ಸಾಂಸ್ಕೃತಿಕ ನಾಯಕನಲ್ಲ. ಅವರು ಜಗತ್ತಿನ ದುಡಿಯುವ ವರ್ಗಗಳ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಸಂಸ್ಕೃತಿ ಮೂಲಕ ಧರ್ಮ ಇರುವುದು ಎನ್ನುವುದೇ ಬಸವ ಸಂಸ್ಕೃತಿ ಎಂದರು.
ಸಾಹಿತಿ ಡಾ. ತಾರಿಣಿ ಶುಭದಾಯಿನಿ ಮಾತನಾಡಿದರು.