

ಸುಂಟಿಕೊಪ್ಪ: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ಕಳೆದ 54 ವರ್ಷಗಳಿಂದ ಆಯೋಜಿಸುತ್ತಿರುವ ಆಯುಧಪೂಜಾ ಸಮಾರಂಭ ಜಿಲ್ಲೆಗೆ ಮಾತ್ರ ಸಿಮೀತವಾಗಿರದೆ ರಾಜ್ಯದಲ್ಲೂ ತನ್ನದೆಯಾದ ಇತಿಹಾಸವನ್ನು ಸೃಷ್ಟಿಸಿದೆ.
ಈ ಸಂಘವು ತನ್ನ ವೈಯಕ್ತಿಕ ಬೆಳವಣಿಗೆಗಿಂತ ಗ್ರಾಮದ ಬೇಕು-ಬೇಡಗಳಿಗೆ ಸಾರ್ವಜನಿಕ ವೇದಿಕೆಯ ಕಾರ್ಯಕ್ರಮದಲ್ಲಿ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯದ ಮಂತ್ರಿ, ಅತಿಥಿ, ಅಧಿಕಾರಿ ಹಾಗೂ ಮಹನೀಯರಲ್ಲಿ ಗ್ರಾಮಕ್ಕೆ ಬೇಕಾದ ಮೂಲ ಸೌಲಭ್ಯಗಳನ್ನು ಮನವಿ ಪತ್ರಗಳನ್ನು ಸಲ್ಲಿಸುವುದರೊಂದಿಗೆ ಈ ಕಾರ್ಯಕ್ರಮದ ವೇದಿಕೆ ಮುಖಾಂತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಗ್ರಾಮದ ಸರ್ವಾಂಗಿಣ ಅಭಿವೃದ್ಧಿಗೆ ಪೂರಕವಾದ ಈ ಆಯುಧಪೂಜಾ ಕಾರ್ಯಕ್ರಮವಾಗುತ್ತಿರುವುದನ್ನು ಊರಿನ ಜನತೆ ಸ್ಮರಿಸಿಕೊಳ್ಳುತ್ತಾರೆ.
ಸಂಘವು ಆಯುಧಪೂಜಾ ಸಮಾರಂಭಕ್ಕೆ ಮಾತ್ರ ಸೀಮಿತವಾಗೊಳ್ಳದೆ ರಕ್ತದಾನ, ಅನಾರೋಗ್ಯ ಪೀಡಿತರಿಗೆ ನೆರವು, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಅಪಘಾತ ಇನ್ನಿತರ ಸಂಕಷ್ಟಗಳು ಎದುರಾದಾಗ ಸಂಘದ ಪದಾಧಿಕಾರಿಗಳು ಧಾವಿಸಿ ಧನ ಸಹಾಯ ವೈಯಕ್ತಿಕ ಸಹಾಯಹಸ್ತ ಚಾಚುವ ಮೂಲಕ ನೆರವಿಗೆ ನಿಲ್ಲುತ್ತಿದೆ. ಅಷ್ಟೇ ಅಲ್ಲದೆ ಸಾಮಾಜಿಕ ಸೇವೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಂದಿಯನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ತನ್ನದೆಯಾದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ.
ಸುಂಟಿಕೊಪ್ಪ ವಾಹನ ಚಾಲಕರ ಸಂಘವು ಆಯುಧ ಪೂಜಾ ಸಮಾರಂಭವು ಸಂಘಟಿತ ಅತ್ಯುತ್ತಮ ಕಾರ್ಯವೈಖರಿಗಳಿಂದಾಗಿ ಜನಪ್ರಿಯತೆಯನ್ನು ಕಂಡಿರುವ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ವಾಹನ ಚಾಲಕರ ಸಂಘಗಳ ಸ್ಥಾಪನೆಗೆ ಪ್ರೇರಣೆಯಾಗಿ ಸಮಾಜಮುಖಿ ಕಾರ್ಯಗಳಲ್ಲಿ ವಿಭಿನ್ನ ರೀತಿಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಾಣಬಹುದಾಗಿದೆ. ಇದಕ್ಕೆ ಪ್ರೇರಣೆ ಸುಂಟಿಕೊಪ್ಪ ವಾಹನ ಚಾಲಕರು ಎಂದು ಸುತ್ತ ಮುತ್ತಲಿನ ಸಂಘಗಳ ಸಂಘಟಕರು ಹೇಳುತ್ತಾರೆ.
ಸುಂಟಿಕೊಪ್ಪ ವಾಹನ ಚಾಲಕರ ಸಂಘದ 55ನೇ ವರ್ಷದ ಅದ್ದೂರಿ ಆಯುಧಪೂಜಾ ಸಮಾರಂಭದ ಅಂಗವಾಗಿ ವಾಹನ ಚಾಲಕರ ವೇದಿಕೆ ಸೇರಿದಂತೆ ಪಟ್ಟಣದ ಮುಖ್ಯ ಬೀದಿಗಳಾದ ಅಯ್ಯಪ್ಪಸ್ವಾಮಿ ದೇವಾಲಯದಿಂದ ಗದ್ದೆಹಳ್ಳದವರೆಗೆ ಅಲ್ಲಿಂದ ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಭವ ಗಣಪತಿ ದೇವಾಲಯದವರೆಗೆ ವಿದ್ಯುತ್ ದೀಪಾಗಳನ್ನು ಅಳವಡಿಸುವ ಮೂಲಕ ಪಟ್ಟಣದಲ್ಲಿ ಆಚರಣೆಯ ಸಿದ್ಧತೆಯಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಅ.1ರಂದು ಸಂಘದ ಸಾರ್ವಜನಿಕ ವೇದಿಕೆಯಲ್ಲಿ ಭವ್ಯ ವೇದಿಕೆಯಲ್ಲಿ ಬೆಂಗಳೂರಿನ ಪ್ರಖ್ಯಾತ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅಧ್ಯಕ್ಷ ಕೆ.ವಿ.ಕಿಟ್ಟಣ್ಣ ರೈ, ಉಪಾಧ್ಯಕ್ಷರಾಗಿ ಅಬ್ದುಲ್ಲಾಕುಟ್ಟಿ, ಎ.ಕೃಷ್ಣಪ್ಪಬಿ, ಪ್ರಧಾನ ಕಾರ್ಯದರ್ಶಿ ಮುನೀರ್ ಕಂಬಿಬಾಣೆ, ಖಜಾಂಚಿ ಅಜೀಜ್, ಸಹ ಕಾರ್ಯದರ್ಶಿ ಪಟ್ಟೆಮನೆ.ಎಸ್.ರಕ್ಷಿತ್‌ರೀನು, ಸಂಘಟನಾ ಕಾರ್ಯದರ್ಶಿ ರಿಜ್ವಾನ್, ಕಾರ್ಯಕಾರಿ ಸಮಿತಿಸದಸ್ಯರಾದ ಸಿ.ಎ.ಬಸಪ್ಪ, ರಾಜ, ಇನಾಸ್ ಡಿಸೋಜ, ಕೆ.ರವಿ, ಬಿ.ಎಸ್.ಸಂದೀಪ್ , ಬಿ.ಕೆ.ಸುರೇಶ್, ಅಸೀಸ್ ಹೊಸಕೋಟೆ, ಅಸ್ಕರ್, ಜೈನುದ್ದೀನ್, ಶಕ್ತಿವೇಲು, ರಫೀಕ್‌ಮೊನು, ಮಣಿ ರಾಜ್ ತಂಬಿ, ಎಂ.ಎ.ದೇವಯ್ಯ, ಜಿ.ಕುಮಾರ, ಎಂ.ಎಸ್.ಶಾಜಿ, ಸಲೀಂ ಗದ್ದೆಹಳ್ಳ ಒಗ್ಗೂಡಿ ಸಮಾರಂಭವನ್ನು ವಿಜೃಭಣೆಯಿಂದ ಆಚರಿಸಲು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.