

ಯಲ್ಲಾಪುರ: ತಾಲೂಕಿನ ಶ್ರೀಕ್ಷೇತ್ರ ಇಡಗುಂದಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಶುಕ್ರವಾರ ಸಾವಿರಾರು ಭಕ್ತರು ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನದಲ್ಲಿ ಶಿವರಾತ್ರಿಯ ಪ್ರಯುಕ್ತ ಶಿವಯೋಗ ಶಿಬಿಕಾರೋಹಣ ಯಂತ್ರೋತ್ಸವ ಹಾಗೂ ಇತರ ಧಾರ್ವಿುಕ ಕಾರ್ಯಗಳು ನಡೆಯಿತು. ರುದ್ರಾಭಿಷೇಕ, ಬಿಲ್ವಾರ್ಚನೆ, ಹಣ್ಣುಕಾಯಿ ಸೇವೆ ಸೇರಿದಂತೆ ವಿವಿಧ ಸೇವೆ, ಹರಕೆಗಳನ್ನು ಸಲ್ಲಿಸಿ ಭಕ್ತರು ಕೃತಾರ್ಥರಾದರು. ಮಹಾಶಿವರಾತ್ರಿಯ ಜಾತ್ರೆಯ ಪ್ರಯುಕ್ತ ಇಡಗುಂದಿ ರಾಮಲಿಂಗೇಶ್ವರ ರಥಬೀದಿಯಲ್ಲಿ ನೂರಾರು ಅಂಗಡಿಗಳು ಬಂದಿದ್ದು, ಜಾತ್ರಾರ್ಥಿಗಳನ್ನು ಸೆಳೆಯುತ್ತಿದೆ. ಇಡಗುಂದಿಯ ರಥಬೀದಿಗಳಲ್ಲಿ ಭಕ್ತರು ಕಿಕ್ಕಿರಿದು ನೆರೆದದ್ದು ಕಂಡು ಬಂದಿತು.
ವಿವಿಧೆಡೆ ಶಿವಾರಾಧನೆ: ತಾಲೂಕಿನ ಆನಗೋಡ ಗೋಪಾಲಕೃಷ್ಣ ದೇವಾಲಯದಲ್ಲಿ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ ನಡೆಯಿತು. ಬಿಲ್ಲಿಗದ್ದೆಯ ಶ್ರೀರಾಮಲಿಂಗೇಶ್ವರ ದೇವಾಲಯ, ಮಲವಳ್ಳಿಯ ರಾಮಲಿಂಗೇಶ್ವರ ದೇವಸ್ಥಾನ, ಪಟ್ಟಣದಲ್ಲಿರುವ ಬಸವೇಶ್ವರ ದೇವಸ್ಥಾನ, ಶಿವದೇವಾಲಯ, ಗಣೇಶಗುಡಿ, ಕನ್ನಡಗಲ್, ಗೋಟಗುಳಿ, ನಂದೊಳ್ಳಿ, ತುಂಬೆಬೀಡು, ಗುಳ್ಳಾಪುರದ ಮೊಗದ್ದೆ, ಕುಂದರಗಿ, ಕೋರೆಮಠ, ಆರತಿಬೈಲ್ ಬಾಳೇಶ್ವರ, ಚಿನ್ನಾಪುರದ ಚಿನ್ನೇಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿಧೆಡೆಯ ಶಿವ ದೇವಾಲಯಗಳಲ್ಲಿ ಶಿವಾರಾಧನೆ ನಡೆಯಿತು.