ಇಕೋ ಬೀಚ್​ಗೆ ಬ್ಲ್ಯೂ ಫ್ಲ್ಯಾಗ್ ಗರಿ

19hnr1
Published on

ಕಾರವಾರ: ಅಂತಾರಾಷ್ಟ್ರೀಯ ಗುಣಮಟ್ಟದ ಸಂಕೇತವಾಗಿರುವ ಪ್ರತಿಷ್ಠಿತ ಬ್ಲ್ಯೂ ಫ್ಲ್ಯಾಗ್ ಪ್ರಮಾಣಪತ್ರಕ್ಕೆ ಹೊನ್ನಾವರದ ಕಾಸರಕೋಡಿನ ಇಕೋ ಬೀಚ್​ನ್ನು ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್ ತಿಳಿಸಿದ್ದಾರೆ.

ಟ್ವಿಟ್ಟರ್​ನಲ್ಲಿ ಪ್ರಕಟಣೆಯನ್ನು ಹಂಚಿಕೊಂಡಿರುವ ಅವರು, ಭಾರತದ ಎಂಟು ಕಡಲ ತೀರಗಳನ್ನು ವಿಜ್ಞಾನಿಗಳು ಹಾಗೂ ಪರಿಸರ ತಜ್ಞರಿರುವ ಸ್ವತಂತ್ರ ತಂಡ ಪರಿಶೀಲನೆ ನಡೆಸಿ ಶಿಫಾರಸು ಮಾಡಿದೆ. ಇದರ ಭಾಗವಾಗಿಯೇ ಸೆ.18 ರಂದು ಐಎಂ ಸೇವಿಂಗ್ ಮೈ ಬೀಚ್ ಎಂಬ ಕಾರ್ಯಕ್ರಮದಡಿ ಎಲ್ಲ ಎಂಟು ಕಡಲ ತೀರಗಳಲ್ಲಿ ರಾಷ್ಟ್ರ ಧ್ಜಜಾರೋಹಣ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಏನಿದು ಬ್ಲ್ಯೂ ಫ್ಲಾಗ್?: ಡೆನ್ಮಾರ್ಕ್ ಕೋಪನ್ ಹೇಗನ್​ನಲ್ಲಿರುವ ಎನ್​ಜಿಒ ಪರಿಸರ ಶಿಕ್ಷಣ ವೇದಿಕೆ ವಿಶ್ವದಲ್ಲಿ ಅತಿ ಸ್ವಚ್ಛವಾಗಿರುವ ಕಡಲ ತೀರಗಳಿಗೆ ಈ ಪ್ರಮಾಣಪತ್ರ ನೀಡಲಿದೆ. ನೀರಿನ ಗುಣಮಟ್ಟ, ಪರಿಸರ ಸ್ನೇಹಿ ವಾತಾವರಣ, ಸುರಕ್ಷತೆಗಳನ್ನು ನೋಡಿ ಈ ಪ್ರಮಾಣಪತ್ರ ನೀಡಲಾಗುವುದು.

ರಾಜ್ಯದಲ್ಲಿ ಎರಡು: ಭಾರತದಲ್ಲಿ ಇದುವರೆಗೂ ಒಂದೂ ಕಡಲತೀರಕ್ಕೆ ಈ ಪ್ರಮಾಣ ಪತ್ರ ಇರಲಿಲ್ಲ. ಕಳೆದ ವರ್ಷ ರಾಜ್ಯದ ಉತ್ತರ ಕನ್ನಡದ ಕಾಸರಕೋಡು, ಉಡುಪಿಯ ಪಡುಬಿದ್ರಿ, ಗುಜರಾತ್​ನ ಶಿವರಾಜಪುರ, ದಿಯು ಮತ್ತು ದಾಮನ್​ನನ ಘೊಗ್ಲಾ, ಕೇರಳದ ಕಪ್ಪದ್, ಆಂಧ್ರ ಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್ ಬೀಚ್, ಅಂಡಮಾನ್ ಮತ್ತು ನಿಕೋಬಾರ್​ನ ರಾಧಾನಗರ ಕಡಲ ತೀರಗಳನ್ನು ಸಿಆರ್​ರೆಡ್ ಕಾಯ್ದೆ ಸಡಿಲ ಮಾಡಿ ಆದೇಶ ಹೊರಡಿಸಲಾಗಿತ್ತು. ಕಾಸರಕೋಡು ತೀರದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಪರಿಸರ ಸ್ನೇಹಿ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಈಗ ಬ್ಲ್ಯೂ ಫ್ಲ್ಯಾಗ್ ಪ್ರಮಾಣಪತ್ರ ಕಾರ್ಯ ಅಂತಿಮ ಹಂತ ತಲುಪಿದ್ದು, ಅಕ್ಟೋಬರ್ ನಡುವಿನ ಹೊತ್ತಿಗೆ ಪ್ರಮಾಣಪತ್ರ ಸಿಗುವ ಸಾಧ್ಯತೆ ಇದೆ.

ಐ ಆಮ್ ಸೇವಿಂಗ್ ಮೈ ಬೀಚ್ ಧ್ವಜಾರೋಹಣ: ಹೊನ್ನಾವರ ತಾಲೂಕಿನ ಕಾಸರಕೋಡಿನ ಕಡಲತೀರದಲ್ಲಿ ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಶನ್ ನಿಮಿತ್ತ ಕೇಂದ್ರ ಸರ್ಕಾರದ ಮಾರ್ಗದರ್ಶನದನ್ವಯ ಕಾರವಾರದ ಪ್ರವಾಸೋದ್ಯಮ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಮೊದಲನೇ ಹಂತದ ಐ ಆಮ್ ಸೇವಿಂಗ್ ಮೈ ಬೀಚ್ ಧ್ವಜಾರೋಹಣವನ್ನು ಶಾಸಕ ಸುನೀಲ ನಾಯ್ಕ ನೆರವೇರಿಸಿದರು. ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ಪುರುಷೋತ್ತಮ, ಹೊನ್ನಾವರ ಅರಣ್ಯ ವಿಭಾಗದ ಡಿಎಫ್​ಒ ಗಣಪತಿ ಕೆ, ಎಸಿಎಫ್ ಕೆ.ಟಿ. ಬೋರಯ್ಯ, ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ರವಿದಾಸ, ಕರಾವಳಿ ಕಾವಲು ಪಡೆ ಅಧಿಕಾರಿಗಳು, ಸ್ಥಳೀಯ ಅರಣ್ಯ ಸಮಿತಿ ಸದಸ್ಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net