

ಬಾಗಲಕೋಟೆ: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಾಗಲಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ತೀವ್ರ ಪ್ರತಿಭಟನೆ ನಡೆಸಿದರು.
ಇಲ್ಲಿನ ಬಿವಿವಿ ಸಂಘದ ಆವರಣದಲ್ಲಿ ಇರುವ ಬೀಳೂರ ಅಜ್ಜನ ಗುಡಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಘೋಷಣೆ ಕೂಗಿದರು.
ಇಂಧನ ಬೆಲೆ ಹೆಚ್ಚಳವನ್ನು ಖಂಡಿಸಿ ಕಾರಿನ ಎರಡು ಬದಿಗೆ ಹಗ್ಗ ಕಟ್ಟಿಕೊಂಡು ಹತ್ತಾರು ಜನರು ಸೇರಿ ಎಳೆದುಕೊಂಡು ರಸ್ತೆಯಲ್ಲಿ ಬರುವ ಮೂಲಕ ಗಮನ ಸೆಳೆದರು. ಹಾಗೆಯೇ ಎತ್ತಿನ ಬಂಡಿಯಲ್ಲಿ ಬೈಕ್ ಇಟ್ಟು ಹಾಗೂ ಕಾರ್ಯಕರ್ತರು ಬೈಕ್ ಎತ್ತಿಕೊಂಡು ಪ್ರತಿಭಟನೆ ಮೆರವಣಿಗೆಯಲ್ಲಿ ನಡೆದು ಬರುವ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ಪರಿಣಾಮ ಎಂದು ಬಿಂಬಿಸಿದರು.
ಬೀಳೂರ ಅಜ್ಜನ ಗುಡಿಯಿಂದ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾ ಮೆರವಣಿಗೆ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ಸರ್ಕಾರದ ಜನವಿರೋಽ ನೀತಿ ಎಂದು ಖಂಡಿಸಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ನಗರಸಭೆ ಸದಸ್ಯೆ ಶಶಿಕಲಾ ಮಜ್ಜಗಿ ಮತ್ತಿತರರು ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕರ್ನಾಟಕ ರಾಜ್ಯದಲ್ಲಿ ದಟ್ಟ ದರಿದ್ರ, ಶನಿ ಸರ್ಕಾರ ಬಂದಿದೆ. ಇದು ತೊಲಗುವವರೆಗೂ ಜನರಿಗೆ ನೆಮ್ಮದಿ ಇಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಅರೇಬರೇಯಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ದುಡ್ಡು ಹೊಂದಿಸಲಾಗದೇ ಇಂಧನ ಬೆಲೆ ಹೆಚ್ಚಿಗೆ ಮಾಡಿವೆ. ಈಗಾಗಲೇ ವಿದ್ಯುತ್ ದರ, ಬಸ್ ಟಿಕೆಟ್ ದರ, ದಿನಸಿ ವಸ್ತುಗಳ ಬೆಲೆ ಎಲ್ಲವನ್ನು ಹೆಚ್ಚಿಸಿ ಸಾರ್ವಜನಿಕರಿಗೆ ಬರೆ ಎಳೆದಿರುವ ಕಾಂಗ್ರೆಸ್ ಸರ್ಕಾರ, ಇದೀಗ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಿಸುವ ಮೂಲಕ ಮತ್ತೆ ಎಲ್ಲ ವಸ್ತುಗಳ ಬೆಲೆಯೂ ಮತ್ತಷ್ಟು ಹೆಚ್ಚಿಗೆ ಆಗುವಂತೆ ಮಾಡಿ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಜೀವನ ನಡೆಸುವುದು ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್, ಅಶೋಕ ಲಿಂಬಾವಳಿ, ಮುಖಂಡರಾದ ಬಸವರಾಜ್ ಯಂಕಂಚಿ, ಮಲ್ಲಯ್ಯ ಮೂಗನೂರ, ಶಿವಾನಂದ ಟವಳಿ, ವೀರಣ್ಣ ಹಳೇಗೌಡರ, ಶ್ರೀಶೈಲಗೌಡ ಪಾಟೀಲ, ಕಲ್ಮೇಶ್ ಗೋಸಾರ, ಸವಿತಾ ಹೊಸೂರ, ಭಾಗೀರತಿ ಪಾಟೀಲ, ಸರಸ್ವತಿ ಕುರುಬರ ಮತ್ತಿತರರು ಇದ್ದರು.