

ಮದ್ದೂರು: ಭಯೋತ್ಪಾದಕರ ವಿರುದ್ಧ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪ್ರಾಣದ ಹಂಗು ತೊರೆದು ಹೋರಾಟ ನಡೆಸಿದ ವೀರ ಯೋಧರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಪಟ್ಟಣದ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುದ ಆವರಣದಲ್ಲಿ ಮೇ 21ರಂದು ಬೆಳಗ್ಗೆ 10 ಗಂಟೆಗೆ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮನ್‌ಮಲ್ ನಿರ್ದೇಶಕ ಎಸ್.ಪಿ.ಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ವಿವಿಧ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಪ್ರವಾಸಿ ಮಂದಿರದ ವೃತ್ತದಿಂದ ತಿರಂಗಾ ಯಾತ್ರೆ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಉಗ್ರ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ತಲುಪಿದ ಬಳಿಕ ಬಹಿರಂಗ ಸಭೆ ನಡೆಯಲಿದೆ ಎಂದರು.
ಅಮಾಯಕ ಪ್ರವಾಸಿಗರನ್ನು ಕೊಂದ ಉಗ್ರರಿಗೆ ದೇಶದ ಸೈನಿಕರು ತಕ್ಕ ಉತ್ತರ ನೀಡಿ ಇಡೀ ಪ್ರಪಂಚಕ್ಕೆ ದೇಶದ ಸೈನಿಕರು ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ದೇಶದ ಅಖಂಡತೆ ಮತ್ತು ಭದ್ರತೆಗೆ ಧಕ್ಕೆ ಉಂಟಾದಾಗ ನಮ್ಮ ದೇಶ ಕಾಪಾಡುವ ಹೊಣೆ ಸೈನಿಕರದ್ದಾಗಿದೆ. ಅವರಿಗೆ ಗೌರವ ಸಲ್ಲಿಸಲಿಕ್ಕೆ ಈ ಯಾತ್ರೆ ಆಯೋಜಿಸಲಾಗಿದ್ದು, ಇದನ್ನು ಒಂದು ರೀತಿಯ ಹಬ್ಬದ ವಾತಾವರಣದೊಂದಿಗೆ ತಿರಂಗಾ ಯಾತ್ರೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಹೇಳಿದರು.
ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇಗುಲದ ಪ್ರಧಾನ ಅರ್ಚಕ ರಾಘವೇಂದ್ರ ರಾವ್ ಮಾತನಾಡಿ, ತಿರಂಗಾ ಯಾತ್ರೆಯಲ್ಲಿ ತಾಲೂಕಿನ ಮಠಾಧಿಪತಿಗಳು, ಮಾಜಿ ಸೈನಿಕರು, ಹಿಂದುಪರ ಸಂಘಟನೆಗಳು, ಕಾಲೇಜು ವಿದ್ಯಾರ್ಥಿಗಳು, ಪ್ರಗತಿಪರ ಚಿಂತಕರು, ಕನ್ನಡಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು, ಬ್ರಾಹ್ಮಣ ಮಹಾಸಭಾ, ರೈತ ಸಂಘ, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ನಾಗರಿಕರು ಪಕ್ಷತೀತವಾಗಿ ಪಾಲ್ಗೊಂಡು ತಿರಂಗಾ ಯಾತ್ರೆಯನ್ನು ಯಶಸ್ವಿಗೊಳಿಸಬೇಕು. ದೇಶದ ವೀರ ಯೋಧರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲರಾಜು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ಕರವೇ ತಾಲೂಕು ಅಧ್ಯಕ್ಷ ಅಶೋಕ್, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸುಧೀರ್‌ಕುಮಾರ್, ಕಾರ್ಯದರ್ಶಿ ಸತ್ಯನಾರಾಯಣ, ಹಿಂದು ಜಾಗರಣಾ ವೇದಿಕೆಯ ಯೋಗಾನಂದ, ಜಿಪಂ ಮಾಜಿ ಸದಸ್ಯ ಬೋರಯ್ಯ, ಮಾಜಿ ಸೈನಿಕ ಕುಮಾರ್, ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಶಂಕರ್, ಮುಖಂಡರಾದ ಯರಗನಹಳ್ಳಿ ಮಹಾಲಿಂಗು, ಸೋಂಪುರ ಉಮೇಶ್, ಚಿಕ್ಕಣ್ಣ ಇದ್ದರು.