

ಹಾವೇರಿ: ಜಿಲ್ಲೆಯಲ್ಲಿ ಕರೊನಾ ವೈರಸ್ನ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾನುವಾರ ರೋಗದ ಲಕ್ಷಣ ಕಂಡುಬಂದಿದ್ದ ಹಾನಗಲ್ಲನ ಅಜ್ಜ ಹಾಗೂ ಮೊಮ್ಮಗನ ಗಂಟಲು ದ್ರವ ಮತ್ತು ರಕ್ತ ಮಾದರಿಯ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ. ಸೋಮವಾರ ಮತ್ತೆ ಆರು ಶಂಕಿತರು ಪತ್ತೆಯಾಗಿದ್ದು, ಅದರಲ್ಲಿ ಮೂವರ ರಕ್ತ ಹಾಗೂ ಕಫದ ಪರೀಕ್ಷೆಗೆ ಶಿವಮೊಗ್ಗಕ್ಕೆ ಕಳಿಸಲಾಗಿದೆ.
ಸೋಮವಾರ ಹಾವೇರಿಯಲ್ಲಿ ಇಬ್ಬರು, ಬಂಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಬ್ಬರ ಕಫ ಹಾಗೂ ರಕ್ತದ ಮಾದರಿ ಪರೀಕ್ಷೆಗೆ ಕಳಿಸಲಾಗಿದೆ. ಇನ್ನುಳಿದ ಮೂವರು ಮಧ್ಯಾಹ್ನ 12ರ ನಂತರ ಆಸ್ಪತ್ರೆಗೆ ಬಂದಿದ್ದು, ಅವರ ಕಫ ಹಾಗೂ ರಕ್ತದ ಮಾದರಿಯನ್ನು ನಾಳೆಗೆ ಲ್ಯಾಬ್ಗೆ ಕಳಿಸಲಾಗುವುದು ಎಂದು ಡಿಎಚ್ಒ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.
ರಟ್ಟಿಹಳ್ಳಿ ಹಾಗೂ ಮಾಸೂರಿನ ಮೂವರಲ್ಲಿ ರೋಗ ಲಕ್ಷಣ ಕಂಡುಬಂದಿದೆ. ಅವರಲ್ಲಿ ಒಬ್ಬರನ್ನು ಶಿವಮೊಗ್ಗಕ್ಕೆ ನೇರವಾಗಿ ಪರೀಕ್ಷೆಗೆ ಕಳಿಸಲಾಗಿದೆ. ಹಜ್ನಿಂದ ವಾಪಸ್ಸಾಗಿರುವ ರಟ್ಟಿಹಳ್ಳಿಯ 45 ವರ್ಷದ ಮಹಿಳೆಯಲ್ಲೂ ರೋಗ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಅವಳನ್ನು ಜಿಲ್ಲಾಸ್ಪತ್ರೆ ವಿಶೇಷ ವಾರ್ಡ್ನಲ್ಲಿ ಇತರರಿಂದ ಪ್ರತ್ಯೇಕಿಸಿ ಇರಿಸಲಾಗಿದೆ. ಹಜ್ ಯಾತ್ರೆಯಿಂದ ವಾಪಸ್ಸಾಗಿದ್ದ ಒಟ್ಟು 28 ಜನರ ಆರೋಗ್ಯವನ್ನು ಸೋಮವಾರ ಪರೀಕ್ಷಿಸಲಾಗಿದೆ.
ಜಿಲ್ಲೆಯಲ್ಲಿ ಕರೊನಾ ದೃಢಪಟ್ಟಿಲ್ಲ: ಕರೊನಾ ರೋಗ ಲಕ್ಷಣ ಕಂಡುಬಂದ ಮಾಹಿತಿ ಎಲ್ಲೆಡೆ ಹರಡಿದ್ದರಿಂದ ಜಿಲ್ಲೆಯ ಜನರು ಆತಂಕಕ್ಕೀಡಾಗಿದ್ದರು. ಆದರೆ, ಅವರಲ್ಲಿ ಕರೊನಾ ವೈರಸ್ ಇಲ್ಲ ಎಂಬುದು ಈಗ ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿರುವುದು ಆತಂಕ ಸ್ವಲ್ಪ ದೂರವಾಗಿದೆ. ಜಿಲ್ಲೆಯಲ್ಲಿ ಈವರೆಗೆ 23 ಶಂಕಿತರು ಕಂಡುಬಂದಿದ್ದಾರೆ. ಯಾರಲ್ಲಿಯೂ ದೃಢಪಟ್ಟಿಲ್ಲ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದು ಡಿಎಚ್ಒ ತಿಳಿಸಿದ್ದಾರೆ.
ಕರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಒಂದು ವಾರ ಬಂದ್ ಘೊಷಿಸಿದ 3ನೇ ದಿನವಾದ ಸೋಮವಾರ ಜಿಲ್ಲೆಯಲ್ಲಿ ವ್ಯಾಪಾರ, ವ್ಯವಹಾರ, ಸಾರಿಗೆ, ಪ್ರಯಾಣ ಎಂದಿನಂತಿತ್ತು. ಕರೊನಾ ಭೀತಿ ಜಿಲ್ಲೆಯ ಜನರನ್ನು ಯಾವುದೇ ರೀತಿಯಲ್ಲಿ ಬಾಧಿಸದೇ ಇರುವುದರಿಂದ ಮಾರುಕಟ್ಟೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಎಂದಿನಂತಿತ್ತು. ಖಾಸಗಿ ವಾಹನ, ಸಾರಿಗೆ ಬಸ್, ಆಟೋ, ಕಾರು, ಬೈಕ್ಗಳ ಓಡಾಟ, ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಸಹ ಎಂದಿನಂತಿತ್ತು. ಕೆಲವರು ಮಾಸ್ಕ್ ಹಾಕಿಕೊಂಡು ಬಂದಿದ್ದರು.
ಮಾಂಸದಂಗಡಿಗಳು ಬಂದ್: ನಗರದಲ್ಲಿ ಕೋಳಿ, ಕುರಿ ಮಾಂಸ ಮಾರಾಟದ ಅಂಗಡಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದರ ಜೊತೆಗೆ ಮೀನು ಮಾರುಕಟ್ಟೆಯನ್ನೂ ಬಂದ್ ಮಾಡಿಸಲಾಗಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಆಹಾರ ಧಾನ್ಯ ಪಡೆಯಲು ಸಾರ್ವಜನಿಕರು ಬಯೋಮೆಟ್ರಿಕ್ ನೀಡಿದ ತಕ್ಷಣ ನ್ಯಾಯಬೆಲೆ ಅಂಗಡಿ ಎದುರೇ ಸ್ವಚ್ಛವಾಗಿ ಕೈತೊಳೆದು ಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಪಡಿತರ ಪಡೆಯಲು ಬಯೋಮೆಟ್ರಿಕ್ ನೀಡುವುದರಿಂದ ಅವರು ತಕ್ಷಣ ನ್ಯಾಯಬೆಲೆ ಅಂಗಡಿಯಲ್ಲಿಟ್ಟಿರುವ ಸ್ಯಾನಿಟೈಸರ್, ಡೆಟ್ಟಾಲ್ ಇಲ್ಲವೇ ಸೋಪ್ನಿಂದ ಕೈತೊಳೆಯಬೇಕು. ಅದಕ್ಕಾಗಿ ನೀರಿನ ವ್ಯವಸ್ಥೆಯನ್ನೂ ಮಾಡಬೇಕು ಎಂದು ಆಹಾರ ಇಲಾಖೆ ಸೂಚನೆ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರೊನಾ ವೈರಸ್ ಜನಜಾಗೃತಿಗಾಗಿ ನೀಡಿರುವ ಪ್ರಚಾರ ಪತ್ರಗಳನ್ನು ನ್ಯಾಯಬೆಲೆ ಅಂಗಡಿಯವರು, ಗೋದಾಮು ವ್ಯವಸ್ಥಾಪಕರು ಇನ್ನಷ್ಟು ಪ್ರತಿ ಮುದ್ರಿಸಿಕೊಂಡು ನ್ಯಾಯಬೆಲೆ ಅಂಗಡಿ ಮುಂದೆ, ಪಡಿತರ ಆಹಾರ ಸಾಗಾಣಿಕೆ ವಾಹನಗಳಿಗೆ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಬೇಕು. ಇದನ್ನು ಆಹಾರ ಶಿರಸ್ತೆದಾರರು, ಆಹಾರ ನಿರೀಕ್ಷಕರು ಮೇಲ್ವಿಚಾರಣೆ ಮಾಡಿ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಆಹಾರ ಇಲಾಖೆ ಉಪನಿರ್ದೇಶಕರು ಸೂಚಿಸಿದ್ದಾರೆ.
ಶೇ. 10ರಷ್ಟು ಬಸ್ ಸ್ಥಗಿತ: ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯಿಂದ ಕರೊನಾ ಜಾಗೃತಿ ಮೂಡಿಸಲು ಕೇಂದ್ರ ತೆರೆಯಲಾಗಿದೆ. ಪ್ರವಾಸಿಗರ ಮೇಲೆಯೂ ಆ ತಂಡ ನಿಗಾ ವಹಿಸಿದೆ. ಅಲ್ಲದೆ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್ಗಳಲ್ಲಿ ಶೇ. 10ರಷ್ಟನ್ನು ಕಡಿತಗೊಳಿಸಲಾಗಿದೆ. ಜಿಲ್ಲೆಯ ಏಳು ಡಿಪೋಗಳಿಂದ ಬೆಂಗಳೂರಿಗೆ ಹೋಗುತ್ತಿದ್ದ ತಲಾ ಒಂದೊಂದು ಬಸ್ನ್ನು ರದ್ದುಗೊಳಿಸಲಾಗಿದೆ. ಬೆಂಗಳೂರು ಹಾಗೂ ಕಲಬುರಗಿ ಮಾರ್ಗಕ್ಕೆ ತೆರಳುವ ಬಸ್ಗಳ ಚಾಲಕ, ನಿರ್ವಾಹಕರಿಗೆ ಮಾಸ್ಕ್ ಕೊಡಲಾಗಿದೆ. ಇನ್ನುಳಿದಂತೆ ಜಿಲ್ಲೆಯಲ್ಲಿ ರೋಗದ ಲಕ್ಷಣಗಳು ಗಂಭೀರವಾಗಿಲ್ಲ. ತುರ್ತು ವಿತರಣೆಗೆ ಮಾಸ್ಕ್ಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ವಾಕರಾರಸಾಸಂ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ‘ವಿಜಯವಾಣಿ’ಗೆ ತಿಳಿಸಿದರು.