ಇಂದು ಕೋಟೆನಗರಿಯಲ್ಲಿ ಪಥ ಸಂಚಲನ

bkt-21-10
ಪಥ ಸಂಚಲನ ಅಂಗವಾಗಿ ಬಾಗಲಕೋಟೆ ನಗರ ಶೃಂಗಾರಗೊಂಡಿರುವುದು.
Published on

ಬಾಗಲಕೋಟೆ: ಸಂಕ್ರಾಂತಿ ಉತ್ಸವ ಅಂಗವಾಗಿ ರಾಷ್ಟ್ರ ಸೇವಿಕಾ ಸಮಿತಿ ಬಾಗಲಕೋಟೆ ವಿಭಾಗ ವತಿಯಿಂದ ನಗರದಲ್ಲಿ ಮಹಿಳಾ ಸ್ವಯಂ ಸೇವಕಿಯಿಂದ ಭಾನುವಾರ ಅದ್ದೂರಿಯಾಗಿ ಪಥ ಸಂಚಲನ ನಡೆಯಲಿದ್ದು, ಕೋಟೆನಗರಿ ಮಧುವನ ಗಿತ್ತಿಯಂತೆ ಶೃಂಗಾರಗೊಂಡಿದೆ.
ಪಥ ಸಂಚಲನ ಆರ್‌ಎಸ್‌ಎಸ್ ಕೇಂದ್ರ ಸ್ಥಳ ನಾಗಪೂರ ನಂತರದಲ್ಲಿ ಹೆಚ್ಚು ಗಮನ ಸೆಳೆದಿರುವ ಬಾಗಲಕೋಟೆ ನಗರದಲ್ಲಿ ದಸರಾ ಸಂದರ್ಭದಲ್ಲಿ ನಗರ ವಾರ್ಷಿಕ ಪಥ ಸಂಚಲನ, ಬಾಲಕರ ಪಥ ಸಂಚಲನ ಇದೀಗ ಮಹಿಳಾ ಪಥ ಸಂಚಲನಲಕ್ಕೆ ಸಾಕ್ಷಿಯಾಗಲಿದೆ. ಎರಡು ವರ್ಷದ ಹಿಂದೆ ಪಥ ಸಂಚಲನ ನಡೆದಿತ್ತು. ಕೋವಿಡ್ ಕಾರಣಕ್ಕೆ ನಂತರ ವರ್ಷಗಳಲ್ಲಿ ನಡೆದಿರಲಿಲ್ಲ. ಪ್ರಸಕ್ತ ವರ್ಷ ಮಹಿಳಾ ಪಥ ಸಂಚಲನ ಕಾರಣಕ್ಕೆ ಸಂಭ್ರಮ ಮನೆ ಮಾಡಿದೆ.
ಪಥ ಸಂಚಲನ ಮಾರ್ಗದೂದ್ದಕ್ಕೂ ಶುಭ, ಸ್ವಾಗತ ಕೋರುವ ಕೌಟೌಗಳು ಅಳವಡಿಸಲಾಗಿದ್ದು ರಾರಾಜಿಸುತ್ತಿವೆ. ಕೋಟೆನಗರಿ ಸಂಪೂರ್ಣ ಮಧುವನಗಿತ್ತಿಯಂತೆ ಶೃಂಗಾರಗೊಂಡಿದೆ. ಪಥ ಸಂಚಲನ ಸ್ವಾಗತಿಸಲು ಮಾರ್ಗ ಮಧ್ಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಪಥ ಸಂಚಲನಕ್ಕೆ ನಗರದ ಸಂಪೂರ್ಣ ಸಜ್ಜಾಗಿದ್ದು, ಹಬ್ಬದ ವಾತಾವರಣ ಸೃಷ್ಠಿಯಾಗಿದೆ.
ಪಥ ಸಂಚಲನ ಸಾಗುವ ಮಾರ್ಗದಲ್ಲಿ ಭಗಸಿಂಗ್, ವನಕೆ ಓಬವ್ವಾ, ಕಿತ್ತೂರಿ ರಾಣಿ ಚನ್ನಮ್ಮ, ಸಂಗೂಳಿ ರಾಯಣ್ಣ ಸೇರಿದಂತೆ ನಾಡಿನ ವಿವಿಧ ಮಹನೀಯರ ವೇಷಧರಿಸಿ ಮಕ್ಕಳು ಕಂಗೂಳಿಸಲಿದ್ದಾರೆ. ಪುಷ್ಪ ವೃಷ್ಠಿ, ಘೋಷಣೆಗಳು ಪಥ ಸಂಚಲನದ ಗಮನ ಸೆಳೆಯಲಿದೆ. ಅಂದಾಜು ೧ ಸಾವಿರಕ್ಕೂ ಹೆಚ್ಚು ಗಣವೇಷಾಧಿಕಾರಿ ಸ್ವಯಂ ಸೇವಕಿಯರು ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ. ಬಸವೇಶ್ವರ ಮೈದಾನದಿಂದ ಸರಿಯಾಗಿ ಸಂಜೆ ೪ ಗಂಟೆಗೆ ಎರಡು ಪಥಗಳಲ್ಲಿ ಆರಂಭಗೊಳ್ಳುವ ಪಥಸಂಚಲನ ನಗರದ ಪ್ರಮುಖ ರಸ್ತೆಗಳನ್ನು ಸಂಚರಿಸಿ ೪.೫೫ಕ್ಕೆ ಮರಳಿ ಮೈದಾನ ತಲುಪಲಿದೆ. ಈ ನಡುವೆ ೪.೪೬ಕ್ಕೆ ಬಸವೇಶ್ವರ ವೃತ್ತದಲ್ಲಿ ಎರಡು ಪಥಗಳು ಸಮಾಗಮವಾಗಲಿದ್ದು, ಜಯ ಘೋಷಗಳು ಮುಗಿಲು ಮುಟ್ಟಲಿವೆ. ಪಥ ಸಂಚಲನ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಬಾಗಲಕೋಟೆ ನಗರದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಂಡಿದೆ.
ಪಥ ಸಂಚಲನ ಪೂರ್ಣಗೊಂಡ ನಂತರ ೫:೨೦ ಕ್ಕೆ ಬಸವೇಶ್ವರ ಕಾಲೇಜು ಮೈದಾನದಲ್ಲಿ ಬಹಿರಂಗ ಕಾರ್ಯಕ್ರಮ ಜರುಗಲಿದ್ದು. ಬಿವಿವಿ ಸಂಘದ ಅಕ್ಕ ಮಹಾದೇವಿ ಮಹಿಳಾ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುಷ್ಮಾದೇವಿ ಒಡೆಯರ ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಯನಗರದ ರಾಷ್ಟ್ರ ಸೇವಿಕಾ ಸಮಿತಿ ಪ್ರಾಂತ ಕಾರ್ಯವಾಹಿಕಾ ವೇದಾ ಕುಲಕರ್ಣಿ ಮುಖ್ಯ ವಕ್ತಾರರಾಗಿ ಆಗಮಿಸಲಿದ್ದಾರೆ. ವಿಭಾಗ ಪಾಲಕ ಅಧಿಕಾರಿ ಸುಧಾ ದೇಸಾಯಿ, ಜಿಲ್ಲಾ ಕಾರ್ಯವಾಹಿಕಾ ಸಂಧ್ಯಾ ಕುಲಕರ್ಣಿ ಸಂಧ್ಯಾ ಕುಲಕರ್ಣಿ, ಭುವನೇಶ್ವರಿ ಕೊರವಾರ ಉಪಸ್ಥಿತರಿವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net