ಇಂದಿನಿಂದ ಹೆಬ್ಬಾರಗಿರಿ

Shivaram Hebbar- Congres
Published on

ಕಾರವಾರ: ಯಲ್ಲಾಪುರ- ಮುಂಡಗೋಡ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಸಂಪುಟದಲ್ಲಿ ಸಚಿವರಾಗುವುದು ಖಚಿತವಾಗಿದೆ.

ಫೆ. 6ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಬೆಳಗ್ಗೆ 10.30ಕ್ಕೆ ಪ್ರಮಾಣವಚನ ಸಮಾರಂಭ ನಡೆಯಲಿದ್ದು, ತಮಗೆ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಮುಖ್ಯಮಂತ್ರಿ ಕಚೇರಿಯಿಂದ ಆಹ್ವಾನ ಬಂದಿದೆ ಎಂದು ಸ್ವತಃ ಶಾಸಕ ಹೆಬ್ಬಾರ ತಿಳಿಸಿದ್ದಾರೆ.

ಈ ಹಿಂದೆ ಯಲ್ಲಾಪುರ ಗ್ರಾಮೀಣ ಭಾಗ ಒಳಗೊಂಡಿದ್ದ ಹಳಿಯಾಳ ವಿಧಾನಸಭೆ ಕ್ಷೇತ್ರದಿಂದ ಆರ್.ವಿ. ದೇಶಪಾಂಡೆ ಹಲವು ಬಾರಿ ಆಯ್ಕೆಯಾಗಿ ಸಚಿವರಾಗಿದ್ದರು. 2008ರಲ್ಲಿ ಯಲ್ಲಾಪುರ- ಮುಂಡಗೋಡ ಪ್ರತ್ಯೇಕ ಕ್ಷೇತ್ರ ರಚನೆಯಾದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಸಚಿವ ಸ್ಥಾನ ಒಲಿಯುತ್ತಿದೆ.

ಜಿಲ್ಲಾ ಉಸ್ತುವಾರಿ : ಶಿವರಾಮ ಹೆಬ್ಬಾರ ಅವರಿಗೆ ಯಾವ ಖಾತೆ ದೊರೆಯಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಜಿಲ್ಲಾ ಉಸ್ತುವಾರಿ ಸ್ಥಾನ ಸಿಗುವುದಂತೂ ಖಚಿತವಾಗಿದೆ.

ಹಿಂದೆ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಹಂಬಲಿಸಿ ಹೆಬ್ಬಾರ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಅವಕಾಶ ಸಿಗದಿದ್ದಾಗ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಆರ್. ವಿ. ದೇಶಪಾಂಡೆ ವಿರುದ್ಧ ಒಳಗೊಳಗೇ ಅಸಮಾಧಾನಗೊಂಡಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದರು.

ದೇಶಪಾಂಡೆ ಹಲವು ವರ್ಷ ಅನುಭವಿಸಿದ್ದ ಜಿಲ್ಲಾ ಉಸ್ತುವಾರಿ ಪಟ್ಟವನ್ನು ತಾವು ಪಡೆದು ಗುರುವಿಗೆ ಸವಾಲು ಹಾಕಲು ಶಿವರಾಜ ಹೆಬ್ಬಾರ ಅವರು ಇದೀಗ ಸಜ್ಜಾಗಿದ್ದಾರೆ.

ಲಾರಿ ಕ್ಲೀನರ್​ನಿಂದ ಸಚಿವ ಗಾದಿವರೆಗೆ...
ಶಿವರಾಮ ಹೆಬ್ಬಾರ ಅವರು ಕಡತೋಕ ಸಮೀಪದ ನವಿಲಗೋಣದವರು. ಮಹಾಬಲೇಶ್ವರ ಹೆಬ್ಬಾರ ಅವರ ಪುತ್ರ. ಕಡತೋಕ ಹೈಸ್ಕೂಲ್​ನಲ್ಲಿಯೇ ಪ್ರೌಢ ಶಿಕ್ಷಣ ಮುಗಿಸಿದ್ದರು. ಅಷ್ಟು ಹೊತ್ತಿಗಾಗಲೇ ಹೆಬ್ಬಾರ ಕುಟುಂಬ ಅಂಕೋಲಾ ತಾಲೂಕಿನ ಶೇವ್ಕಾರಿನಲ್ಲಿ ಜಮೀನು ಪಡೆದಿತ್ತು. ಕೃಷಿ ಕಾರ್ಯದ ಜತೆಗೆ ಹೆಬ್ಬಾರ ಬೇರೆ ದುಡಿಮೆ ಮಾಡಲು ಹೊರಟರು. ಕೆಲ ದಿನ ತಮ್ಮ ಬಾವನ ಲಾರಿಯಲ್ಲಿ ಕ್ಲೀನರ್ ಆಗಿ ಕಾರ್ಯನಿರ್ವಹಿಸಿದ್ದರು. ನಂತರ 1979ರಲ್ಲಿ ಸ್ವಂತ ಲಾರಿ ಖರೀದಿಸಿ ಸ್ವತಃ ಚಾಲಕನಾಗಿ ಉದ್ಯಮ ಪ್ರಾರಂಭಿಸಿದ್ದರು. ನಂತರ ಹಂತ, ಹಂತವಾಗಿ ಬೆಳೆದು ದೊಡ್ಡ ಉದ್ಯಮಿಯಾಗಿದ್ದು, ಈಗ ಇತಿಹಾಸ.

ಬಿಜೆಪಿ ಮೂಲ
ಬಿಜೆಪಿ ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಕೀರ್ತಿ ಹೆಬ್ಬಾರ ಅವರಿಗೆ ಸಲ್ಲುತ್ತದೆ. ಪಕ್ಷದ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ಕೆಲ ವೈಮನಸ್ಸುಗಳಿಂದ ಅವರು ಕಮಲ ಪಾಳಯ ಬಿಡಬೇಕಾಯಿತು. ಕಾಂಗ್ರೆಸ್ ಸೇರಿದ ಅವರು ಯಲ್ಲಾಪುರದ ವಿವಿಧ ಸಹಕಾರಿ ಸಂಘಗಳ ನಿರ್ದೇಶಕರಾದರು. ಎಪಿಎಂಸಿ ಅಧ್ಯಕ್ಷರಾದರು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದರು. 2008ರಲ್ಲಿ ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರ ರಚನೆಯಾದಾಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಅವರು ಸೋಲು ಕಂಡರೂ ಛಲ ಬಿಡದೇ ಕ್ಷೇತ್ರಾದ್ಯಂತ ಓಡಾಟ ನಡೆಸಿದ್ದರು. 2013 ಹಾಗೂ 2018ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಜಯಗಳಿಸಿದರು. 2019ರಲ್ಲಿ ಮತ್ತೆ ಬಿಜೆಪಿ ಸೇರಿ, ಡಿಸೆಂಬರ್​ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆಲುವಿನೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧನೆ ದಾಖಲಿಸಿದ್ದರು.

ಸಂಪುಟ ದರ್ಜೆ ಸಚಿವ ಗೌರವಕ್ಕೆ ಕಾರಣೀಕರ್ತರಾದ ಕ್ಷೇತ್ರದ ಜನ, ಕಾರ್ಯಕರ್ತರು ಅಭಿಮಾನಿಗಳ ಸಲಹೆ, ಸಹಕಾರದೊಂದಿಗೆ, 40 ವರ್ಷದ ಸಾರ್ವಜನಿಕ ಕ್ಷೇತ್ರದ ಅನುಭವ ಬಳಸಿ ಕಾರ್ಯನಿರ್ವಹಿಸಲಿದ್ದೇನೆ. ಮತದಾರರ ಭಾವನೆಗಳಿಗೆ ಎಂದೂ ಚ್ಯುತಿ ಬಾರದಂತೆ, ನನ್ನ ಮೇಲೆ ನಂಬಿಕೆ ಇಟ್ಟ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರದ ನಾಯಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. | ಶಿವರಾಮ ಹೆಬ್ಬಾರ ಯಲ್ಲಾಪುರ-ಮುಂಡಗೋಡ ಕ್ಷೇತ್ರದ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net