ವಿಜಯವಾಣಿ ಸುದ್ದಿಜಾಲ ಕಾರವಾರ ಗಂಗಾವಳಿ ಸೇತುವೆ ನಿರ್ಮಾಣಕ್ಕೆ ನದಿಗೆ ಸುರಿದ ಮಣ್ಣು ತೆರವು ಮಾಡದೇ ಪ್ರವಾಹಕ್ಕೆ ಕಾರಣರಾದ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಇಂಜಿನಿಯರನ್ನು ಕೂಡಿ ಹಾಕುವುದಾಗಿ ಶಾಸಕಿ ರೂಪಾಲಿ ನಾಯ್ಕ ಎಚ್ಚರಿಕೆ ನೀಡಿದ ಘಟನೆ ಸೋಮವಾರ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಜಿಪಂ ಸಭಾಭವನದಲ್ಲಿ ಸೋಮವಾರ ಆಯೋಜನೆಯಾಗಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಕೆಂಡಾಮಂಡಲರಾಗಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
"ಸಮಸ್ಯೆ ಪರಿಹಾರಕ್ಕೆ ಸಂಪರ್ಕಿಸಿದರೆ ಸಿಗುವುದಿಲ್ಲ. ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಬೆದರಿಸಿದಾಗ ಇಂದು ಸಭೆಗೆ ಆಗಮಿಸಿದ್ದಿರಿ. ನಿಮ್ಮನ್ನು ಬಿಡುವುದಿಲ್ಲ ಇಲ್ಲಿಯೇ ಕೂಡಿ ಹಾಕ್ತೇವೆ ನಿಮ್ಮನ್ನು" ಎಂದು ಅಬ್ಬರಿಸಿದರು. ಮಂಜಗುಣಿ ಸೇತುವೆ ಬಳಿ ಹೋಗಿ ಅಲ್ಲಿಯ ಜನರ ಸಮಸ್ಯೆ ಪರಿಹಾರ ನೀಡಿ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, "ಈ ಇಂಜಿನಿಯರ್ ಅವರನ್ನು ಉತ್ತರಕನ್ನಡಕ್ಕೆ ನೇಮಕ ಮಾಡಿದ್ದರೂ ಅವರು ಹುಬ್ಬಳ್ಳಿಯಲ್ಲಿ ಇರುತ್ತಾರೆ. ಇನ್ನು ಮುಂದೆ ಜಿಲ್ಲೆಯಲ್ಲಿಯೇ ಇರಬೇಕು ಇಲ್ಲದಿದ್ದರೇ, ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು" ಎಂದು ಎಚ್ಚರಿಸಿದರು.
ಶಾಸಕ ಸುನೀಲ್ ನಾಯ್ಕ ಮಾತನಾಡಿ, "ಗೆರಸೊಪ್ಪಾದಲ್ಲಿ ನಿರ್ಮಿಸುತ್ತಿರುವ ಸೇತುವೆಯ ಹಣೆಬರಹವೂ ಇದೇ ಆಗಿದೆ.ಕೆಳಗೆ ಓಡಾಡುವುದಕ್ಕೆ ಇದ್ದ ಸೇತುವೆಯನ್ನು ತೆಗೆದಿದ್ದಾರೆ" ಎಂದರು.
ಶಾಸಕ ದಿನಕರ ಶೆಟ್ಟಿ, ಜಿಪಂ ಸಿಇಒ ಪ್ರಿಯಾಂಗಾ ಎಂ. ಎಸ್ಪಿ ಡಾ. ಸುಮನ್ ಪೆನ್ನೇಕರ್ ಇದ್ದರು.
"
ಆಗಸ್ಟ್ 5 ರಂದು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಲಾಗುವುದು. ಅಧಿಕಾರಿಗಳು ವಾರದಲ್ಲಿ 5 ದಿನ ಇಲ್ಲಿಯೇ ಇರಬೇಕು. ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ