ಆಹಾರ ಉತ್ಪನ್ನಗಳಿಗೆ ರಾಸಾಯನಿಕ ಸಿಂಪರಣೆಗೆ ಕಡಿವಾಣ ಹಾಕಿ

bkt-24-4
Published on

ಬಾಗಲಕೋಟೆ: ಆಹಾರ ಉತ್ಪನ್ನಗಳಿಗೆ ರಾಸಾಯನಿಕ ಸಿಂಪರಣೆ ಮಾಡುವ ಪದ್ದತಿಗೆ ಕಡಿವಾಣ ಹಾಕುವ ಕೆಲಸವಾಗಬೇಕೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಸೋಮವಾರ ಜರುಗಿದ ಜಿಲ್ಲಾ ಪಂಚಾಯ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇತ್ತೀಚಿನ ತರಕಾರಿ, ಹಣ್ಣು ಹಂಪಲ ತಿನ್ನುವ ಸ್ಥಿತಿ ಇಲ್ಲ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ರಾಸಾಯನಿಕ ಸಿಂಪರಣೆ ಮಾಡುತ್ತಿದ್ದಾರೆ ಇದು ತಪ್ಪಬೇಕು. ಸಂಬಂಧಿಸಿದ ಇಲಾಖೆಯವರು ಈ ಬಗ್ಗೆ ಹೆಚ್ಚಿನ ಗಮನ ಹರಿಸ ಈ ಪದ್ದತಿಗೆ ಕಡಿವಾಣ ಹಾಕುವದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.

ರಾಂಪೂರದಲ್ಲಿ ಹೆಸರು ಬೀಜ ಸಿಗುತ್ತಿಲ್ಲ ಎಂದು ಶಾಸಕ ಎಚ್.ವಾಯ್.ಮೇಟಿ ಆಪಾದಿಸಿದಾಗ ಇದಕ್ಕೆ ಪ್ರತಿಕ್ರಿಯೆ ನೀಡಿದ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ಬೀಜದ ಕೊರತೆ ಇಲ್ಲವೆಂದು ಸಮಜಾಯಿಸಿ ಉತ್ತರ ನೀಡಿದಾಗ ಅಕ್ರಮ ಬೀಜ ಮತ್ತು ಗೊಬ್ಬರ ಮಾರಾಟದ ಬಗ್ಗೆ ನಿಗಾವಹಿಸಲು ಸಚಿವರು ಸಲಹೆ ನೀಡಿದರು. ಕಟಗೇರಿಯಲ್ಲಿ 10 ಹೊಂಡಗಳ ನಿರ್ಮಾಣಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಆದರೆ ಆ ಕೆಲಸವಾಗಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಚೆಕ್‍ಡ್ಯಾಂ ನಿರ್ಮಾಣ ಬಗೆಗೆ ತನಿಖೆ ನಡೆಸಲು ಅಧಿಕಾರಿಗಳಿಗೆ ಬೀಳಗಿ ಶಾಸಕ ಜೆ.ಟಿ.ಪಾಟೀಲ ಸಲಹೆ ನೀಡಿದರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ತಿಮ್ಮಾಪೂರ ಸೂಚಿಸಿದರು. ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡುವುದೇ ಇಲ್ಲ. ಕೃಷಿ ಸಾಮಗ್ರಿ ಹಂಚಿಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಶಾಸಕರಾದ ಜೆ.ಟಿ.ಪಾಟೀಲ ಮತ್ತು ಭೀಮಸೇನ ಚಿಮ್ಮನಕಟ್ಟಿ ಸಭೆಯ ಗಮನಕ್ಕೆ ತಂದಾಗ ಮೇಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಸಚಿವರು ತಿಳಿಸಿದರು.
ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಸಿ.ಜಿ.ಮಿರ್ಜಿ ಜಿಲ್ಲೆಯಲ್ಲಿರುವ 556 ಹೆಕ್ಟರ ಅರಣ್ಯ ಭೂಮಿಯಲ್ಲಿ 3.98 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದ್ದು, ಇದರಲ್ಲಿ ಶೇ.90 ರಷ್ಟು ಸಸಿಗಳು ಬೆಳೆದಿರುವುದಾಗಿ ಸಭೆಗೆ ತಿಳಿಸಿದಾಗ ಶೇ.40 ರಷ್ಟು ಕೂಡಾ ಸಸಿಗಳು ಸಸಿಗಳು ಬೆಳೆದಿರುವದಿಲ್ಲ. ಬೆಳೆದಿದ್ದರೇ ಸೂಕ್ತ ಬಹುಮಾನ ನೀಡುವುದಾಗಿ ಜೆ.ಟಿಪಾಟೀಲ ಹೇಳಿದರು. ಅರಣ್ಯ ಅಧಿಕಾರಿಗಳು ಜನಪ್ರತಿನಿಧಿಗಳ ಪೋನ್ ಸಹ ತೆಗೆಯುತ್ತಿಲ್ಲ. ಅಧಿಕಾರಿಗಳು ತಮ್ಮ ವರ್ತನೆ ಬದಲಾಗದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಸಚಿವರು ತಿಳಿಸಿದರು.

ಶಾಲಾ ಕೊಠಡಿ ದುರಸ್ಥಿಗೆ ಪ್ರತಿ ಕ್ಷೇತ್ರಕ್ಕೆ ಬಂದಿರುವ ಅನುದಾನವೆಷ್ಟು, ದುರಸ್ಥಿಗೆ ಕ್ರಮಕೈಗೊಂಡಿದ್ದಿರಾ, ಕ್ರೀಯಾ ಯೋಜನೆ ರೂಪಿಸಲಾಗಿದೆಯೇ ಎಂಬ ಪ್ರಶ್ನೆಗಳನ್ನು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ಅವರಿಗೆ ಕೇಳಿದರು. ಈಗಾಗಲೇ ತಮ್ಮ ಕೋಟಾದಡಿ 4.83 ಕೋಟಿ ರೂ.ಗಳ ಬಿಡುಗಡೆ ಮಾಡಿದ್ದಾರೆ. ಈ ಅನುದಾನ ಸಮರ್ಪಕ ಬಳೆಕೆಗೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಗಣಿ ಅನುದಾನದಲ್ಲಿ ಹಣ ಇದ್ದರೂ ಶಾಲಾ ಕೊಠಡಿಗಳ ದುರಸ್ಥಿ ಆರಂಭಗೊಂಡಿಲ್ಲವೆಂದು ಶಾಸಕ ಎಚ್.ವಾಯ್.ಮೇಟಿ ಆರೋಪಿಸಿದ ಹಿನ್ನಲೆಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸದ ಗಣಿ ಇಲಾಖೆಯ ಅಧಿಕಾರಿ ಮುತ್ತಪ್ಪ ವಿರುದ್ದ ಕ್ರಮಕ್ಕಾಗಿ ಸರ್ಕಾರಕ್ಕ ಪತ್ರ ಕಳುಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಪಶು ಇಲಾಖೆ ಅಧಿಕಾರಿಗಳು ಹವಾಮಾನಕ್ಕೆ ತಕ್ಕಂತೆ ಬರುವಂತ ರೋಗಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಔಷಧಿ ವಿತರಿಸಲು ಕ್ರಮವಹಿಸಬೇಕು. ಪಶು ಚಿಕಿತ್ಸಾ ಕೇಂದ್ರಗಳಿಗೆ ಮೇಲಾಧಿಕಾರಿಗಳು ಭೇಟಿ ನೀಡಲು ಮುಂದಾಗಿ ಜಿಲ್ಲೆಯಲ್ಲಿರುವ ಪಶು ಸಂಪತ್ತಿನ ಅಂಕಿ ಅಂಶಗಳನ್ನು ಮಾಹಿತಿ ಕಲೆ ಹಾಕಲು ಸಚಿವರು ತಿಳಿಸಿದರು.

ಜಲಜೀವನ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಗುಣಮಟ್ಟದ ಕಾಮಗಾರಿ ಆಗದೇ ಕಳಪೆ ಮಟ್ಟದ ಕಾಮಗಾರಿ ನಡೆದಿದೆ. ಕಾಮಗಾರಿ ಪರಿಶೀಲನೆಗೆ ರಾಜ್ಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ಸರಕಾರಕ್ಕೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ನಂತರ ವಿವಿಧ ಇಲಾಖೆಯಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕರಾದ ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಎಚ್.ವಾಯ್.ಮೇಟಿ, ಬೀಮಸೇನ ಚಿಮ್ಮನಕಟ್ಟಿ, ಸಿದ್ದು ಸವದಿ, ಜಗದೀಶ ಗುಡಗುಂಟಿ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾ‌ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ ಮೋಸಿನ್, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಓ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಯುಕೆಪಿ ಮಹಾ ವ್ಯವಸ್ಥಾಪಕ ರಮೇಶ ಕಳಸದ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಸೇರದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net