ಆಸ್ಪತ್ರೆಗೆ ಬೀಗ ಹಾಕಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ

13SIRSI1
Published on

ಶಿರಸಿ: ವೈದ್ಯೆಯೊಬ್ಬರ ವರ್ಗಾವಣೆಯಿಂದ ಉಂಟಾದ ಗೊಂದಲದಲ್ಲಿ ತಾಲೂಕಿನ ಭೈರುಂಬೆಯ ಆಯುರ್ವೆದ ಆಸ್ಪತ್ರೆ ಬಾಗಿಲು ಮುಚ್ಚಿ ಮೂರು ದಿನಗಳಾಗಿದ್ದು, ರೋಗಿಗಳು ಪರದಾಡುವಂತಾಗಿದೆ. ಹಾಗಾಗಿ ಆಸ್ಪತ್ರೆಗೆ ಬೀಗ ಹಾಕಿದ ವೈದ್ಯೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಒತ್ತಾಯಿಸಲಾಯಿತು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಸಭೆಯಲ್ಲಿ ಸದಸ್ಯ ನರಸಿಂಹ ಹೆಗಡೆ ವಿಷಯ ಪ್ರಸ್ತಾಪಿಸಿ, ಭೈರುಂಬೆ ಆಯುರ್ವೆದ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ವೈದ್ಯರ ವರ್ಗಾವಣೆಯಾದರೂ ನೂತನವಾಗಿ ಬಂದ ವೈದ್ಯರಿಗೆ ಆಸ್ಪತ್ರೆ ಬೀಗವನ್ನು ನೀಡದೆ ಸತಾಯಿಸುತ್ತಿದ್ದಾರೆ. ಸಿಬ್ಬಂದಿ ಬಳಿಯಿರುವ ಬೀಗವನ್ನೂ ತೆಗೆದುಕೊಂಡು ಹೋಗಿದ್ದಾರೆ. ಕಳೆದ 3 ದಿನಗಳಿಂದ ಆಸ್ಪತ್ರೆ ಬಂದಾಗಿದೆ. ರೋಗಿಗಳು ಆಸ್ಪತ್ರೆವರೆಗೆ ಆಗಮಿಸಿ ವಾಪಸ್ಸಾಗುತ್ತಿದ್ದಾರೆ. ಅನಾರೋಗ್ಯಪೀಡಿತರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯ ಚಾವಿ ಕೊಂಡೊಯ್ದ ವೈದ್ಯರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವೈಯಕ್ತಿಕ ಕಾರಣಕ್ಕೆ ರೋಗಿಗಳಿಗೆ ತೊಂದರೆ ನೀಡುವುದು ಸರಿಯಲ್ಲ. ಈ ಕುರಿತು ಮೇಲಧಿಕಾರಿಗೆ ವರದಿ ನೀಡಿ ಕ್ರಮವಹಿಸಬೇಕು ಎಂದರು.

ಕರೋನಾ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಸ್ವಚ್ಛಗೊಳಿಸಲಾಗಿದೆ. ಪ್ರತಿಯೊಂದು ಬಸ್​ಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆಗುತ್ತಿದೆ. ಕರೋನಾ ಶಂಕಿತರು, ರೋಗಿಗಳು ಬಂದರೆ ಬಸ್ ನಿಲ್ದಾಣದಲ್ಲಿ ಪ್ರತ್ಯೇಕ ಕೊಠಡಿ ಮೀಸಲಿಡುವಂತೆ ತಾಲೂಕು ಆಡಳಿತ ಕೋರಿದ್ದು ಅದರಂತೆ ಕೊಠಡಿ ನೀಡಲಾಗುವುದು ಎಂದು ಸಾರಿಗೆ ಸಂಸ್ಥೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ವಿನಾಯಕ ಭಟ್ಟ, ತಾಪಂ ಇಒ ಎಫ್.ಜಿ.ಚಿನ್ನಣ್ನನವರ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ ಇದ್ದರು.

ಜಾತ್ರೆ ಪ್ರಯುಕ್ತ ಹಳೇ ಬಸ್ ನಿಲ್ದಾಣದ ಕಾರ್ಯಾಚರಣೆಗಳು ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರವಾಗಿದೆ. ಇದೇ ಸಂದರ್ಭದಲ್ಲಿ ಹಳೆಯ ಬಸ್ ನಿಲ್ದಾಣದ ಮರುನಿರ್ವಣ ಕಾಮಗಾರಿ ಆರಂಭಿಸಬೇಕು. ಕಳೆದ ಎರಡೂವರೆ ವರ್ಷದಿಂದ ಗುತ್ತಿಗೆ ನೀಡಲಾಗಿದೆ ಎಂದು ಹೇಳುತ್ತ ಕಾಲಕಳೆಯಲಾಗಿದೆ. ತಕ್ಷಣ ಈ ಸಮಸ್ಯೆ ಬಗೆಹರಿಸಬೇಕು. | ಚಂದ್ರು ದೇವಾಡಿಗ- ತಾ.ಪಂ. ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net