

ಸಿದ್ದಾಪುರ: ತಾಲೂಕು ಆಸ್ಪತ್ರೆಯಲ್ಲಿ ಬಡವರ ಚಿಕಿತ್ಸೆಗೆ ಬಳಕೆಯಾಗಬೇಕಾಗಿದ್ದ ಲಕ್ಷಾಂತರ ರೂ. ಮೌಲ್ಯದ ಔಷಧ ಚರಂಡಿ ಸೇರುತ್ತಿರುವ ಆರೋಪ ಕೇಳಿಬಂದಿದೆ. ಮಾರ್ಚ್ 30ಕ್ಕೆ ಅವಧಿ ಮುಕ್ತಾಯವಾಗುವ ಸೋಡಿಯಂ ಕ್ಲೋರೈಡ್ ಇಂಜೆಕ್ಷನ್ (ಗ್ಲೂಕೋಸ್)ಬಾಟಲಿಗಳನ್ನು ಆಸ್ಪತ್ರೆಯ ಹಿಂದೆ ಹಂತ ಹಂತವಾಗಿ ಚೆಲ್ಲಿ ಖಾಲಿ ಮಾಡಲಾಗುತ್ತಿದೆ.
ಸಮಸ್ಯೆ ಆಗಿದ್ದೇನು?: ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಆಂಡ್ ವೇರ್ ಹೌಸಿಂಗ್ ಸೊಸೈಟಿಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಬಟವಾಡೆಯಾಗುತ್ತವೆ. ಔಷಧಗಳು ಖಾಲಿಯಾದಂತೆ ಬೇಡಿಕೆ ಸಲ್ಲಿಸಿ ಹೊಸ ಔಷಧ ತರಿಸಿಕೊಳ್ಳುವುದು, ಪೂರೈಕೆಯಾದಂತೆ ಹಳೆಯ ಔಷಧಗಳನ್ನು ಆಸ್ಪತ್ರೆಯಲ್ಲಿ ಹಾಗೂ ಇತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಂಚಿಕೆ ಮಾಡಿ ಖಾಲಿ ಮಾಡಿಕೊಳ್ಳುವ ಜವಾಬ್ದಾರಿ ಆಯಾ ಆಸ್ಪತ್ರೆಯದ್ದು. ಆದರೆ, ಸಿದ್ದಾಪುರ ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯಂದ ಸೋಡಿಯಂ ಕ್ಲೋರೈಡ್ ಇಂಜೆಕ್ಷನ್ನ 150 ಬಾಕ್ಸ್ (ಒಂದು ಬಾಕ್ಸ್ನಲ್ಲಿ 15 ಬಾಟಲ್ಗಳಿರುತ್ತವೆ)ಗಳ ಹಳೆಯ ಸ್ಟಾಕ್ ಖಾಲಿಯಾಗದೇ ಉಳಿದಿದೆ. ಮಾರ್ಚ್ ಅಂತ್ಯಕ್ಕೆ ಅದರ ಬಳಕೆಯ ಅವಧಿ ಮುಕ್ತಾಯವಾಗುತ್ತಿದೆ. ಅದನ್ನು ವಾಪಸ್ ಕಳಿಸಿದಲ್ಲಿ ತೊಂದರೆ ಉಂಟಾಗುತ್ತದೆ. ಅಧಿಕಾರಿಗಳ ವಿರುದ್ಧ ಪ್ರಶ್ನೆ ಏಳುತ್ತದೆ ಎಂಬ ಕಾರಣಕ್ಕೆ ಆಸ್ಪತ್ರೆಯ ನೌಕರರನ್ನು ಬಳಸಿಕೊಂಡು ದಿನಕ್ಕೆ ಅಷ್ಟಷ್ಟೇ ಬಾಟಲಿಗಳನ್ನು ಬಕೆಟ್ನಲ್ಲಿ ಖಾಲಿ ಮಾಡಿ ಚರಂಡಿಗೆ ಹರಿಸುತ್ತಿರುವುದಾಗಿ ತಿಳಿದುಬಂದಿದೆ. ಈ ಕುರಿತ ಫೋಟೋಗಳು ‘ವಿಜಯವಾಣಿ’ಗೆ ಲಭ್ಯವಾಗಿವೆ.
ತಾಲೂಕು ಆಸ್ಪತ್ರೆಗಳಿಗೆ ಡ್ರಗ್ಸ್ ಲಾಜಿಸ್ಟಿಕ್ನಿಂದಲೂ ಔಷಧ ಪೂರೈಕೆಯಾಗುತ್ತವೆ. ಅವರೂ ನೇರವಾಗಿ ಕೆಲ ಅಗತ್ಯ ಔಷಧ ಖರೀದಿಸಬಹುದು. ಅವಧಿ ಮುಕ್ತಾಯವಾಗುವಂಥದ್ದಿದ್ದರೆ ಅದನ್ನು ಮೊದಲೇ ತಿಳಿಸಿ ಅಗತ್ಯವಿದ್ದಲ್ಲಿ ಖರ್ಚು ಮಾಡಲು ಸೂಚಿಸಲಾಗುವುದು. ಅವಧಿ ಮುಗಿದಲ್ಲಿ ಅದನ್ನು ಡ್ರಗ್ಸ್ ಲಾಜಿಸ್ಟಿಕ್ಸ್ ಸಂಸ್ಥೆ ವಾಪಸ್ ಪಡೆಯುತ್ತದೆ. ಸಿದ್ದಾಪುರದಲ್ಲಿ ಏನಾಗಿದೆ ಎಂಬುದು ಗಮನಕ್ಕೆ ಬಂದಿಲ್ಲ. ಪರಿಶೀಲಿಸಲಾಗುವುದು. | ಡಾ.ಜಿ.ಎನ್. ಅಶೋಕಕುಮಾರ ಡಿಎಚ್ಒ
15 ರೂಪಾಯಿ ಶುಲ್ಕ
ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಬಿಪಿಎಲ್ ಪಡಿತರ ಕಾರ್ಡ್ದಾರರಿಗೆ ಉಚಿತ ಹಾಗೂ ಎಪಿಎಲ್ ಕಾರ್ಡ್ದಾರರ ನೋಂದಣಿಗೆ 5 ರೂ. ಶುಲ್ಕ ಪಡೆಯಲಾಗುತ್ತದೆ. ಆದರೆ, ಸಿದ್ದಾಪುರದಲ್ಲಿ 15 ರೂ. ಪಡೆಯಲಾಗುತ್ತದೆ. ಎಲ್ಲ ಆಸ್ಪತ್ರೆಗಳಂತೆ ಇಲ್ಲಿಯೂ ಶುಲ್ಕ ಪಡೆಯುವಂತೆ ತಾಪಂನಲ್ಲಿ ಠರಾವು ಮಾಡಲಾಗಿದೆ. ಆದರೂ ಹೆಚ್ಚಿನ ಹಣ ವಸೂಲಿ ನಿಲ್ಲಿಸದಿದ್ದರೆ, ತಾಲೂಕು ಆಸ್ಪತ್ರೆಯ ಎದುರು ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ತಾಪಂ ಸದಸ್ಯ ನಾಸಿರ್ ಶೇಖ್ ತಿಳಿಸಿದ್ದಾರೆ.
ಬಡ ರೋಗಿಗಳ ಚಿಕಿತ್ಸೆಗಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಸರ್ಕಾರವು ಔಷಧ ಪೂರೈಸುತ್ತದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಂದ ಅದು ಹಾಳಾಗುತ್ತಿದೆ ಎಂಬುದನ್ನು ಕೇಳಿ ಬೇಸರವಾಯಿತು. ಈ ಕುರಿತು ತನಿಖೆ ನಡೆಸಿ ಕ್ರಮ ವಹಿಸಬೇಕು.| ನಾಸಿರ್ ಖಾನ್ ತಾಪಂ ಸದಸ್ಯ