ಆಸ್ತಿ, ಪ್ರಾಣ ರಕ್ಷಣೆಗೆ ಅಗ್ನಿಶಾಮಕ ದಳ ಶ್ರಮ

20250417_122017
Published on

ಅರಸೀಕೆರೆ: ಸಾರ್ವಜನಿಕರ ಆಸ್ತಿ, ಪ್ರಾಣ ರಕ್ಷಣೆಗೆ ಅಗ್ನಿಶಾಮಕ ದಳ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಪ್ರಾಂತೀಯ ಅಗ್ನಿಶಾಮಕ ಮುಖ್ಯಾಧಿಕಾರಿ ಪಿ.ಎಸ್.ಜಯರಾಮ್ ಅಭಿಪ್ರಾಯಪಟ್ಟರು.

ನಗರದ ಅಗ್ನಿಶಾಮಕ ಠಾಣಾ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಹುತಾತ್ಮರ ಸ್ಮಾರಕವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು. ಮಿಲಿಟರಿ, ಆರಕ್ಷಕ ಇಲಾಖೆಯ ಸಿಬ್ಬಂದಿ ರೀತಿ ಜನರ ಆಸ್ತಿ ಪಾಸ್ತಿ, ಜನ, ಜಾನುವಾರು ರಕ್ಷಣೆ ವಿಷಯದಲ್ಲಿ ಅಗ್ನಿಶಾಮಕ ದಳ ಶಕ್ತಿಮೀರಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಕರ್ತವ್ಯದ ವೇಳೆ ಜೀವ ಕಳೆದುಕೊಂಡವರೂ ಇದ್ದಾರೆ. ಅವರ ಸ್ಮರಣಾರ್ಥ ಸ್ಮಾರಕ ನಿರ್ಮಿಸಿ ಸ್ಮರಣೆಗೆ ಮುಂದಾಗಿರುವುದು ಹುತಾತ್ಮರಿಗೆ ನಿಜವಾದ ಗೌರವ ನೀಡಿದಂತಾಗಿದೆ ಎಂದರು.

ಮೆಚ್ಚುಗೆ: ಅಗ್ನಿಶಾಮಕ ಠಾಣೆಯ ಆವರಣದ ವಾತಾವರಣ ಮತ್ತು ಸ್ಮಾರಕ ನಿರ್ಮಾಣ ಇತರರಿಗೆ ಪ್ರೇರಣೆ ನೀಡುವಂತಿದೆ. ಠಾಣಾ ಆವರಣದೊಳಗಿನ ಬಾಳೆ, ಹಲಸು, ಅಡಕೆ, ತೆಂಗು, ಪರಿಸರವನ್ನು ಅವಲೋಕಿಸಿ ಠಾಣಾಧಿಕಾರಿ ಮತ್ತು ಸಿಬ್ಬಂದಿಗೆ ಮೆಚ್ಚುಗೆ ಸೂಚಿಸಿದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ನವೀನ್‌ಕುಮಾರ್, ಸ್ಥಳೀಯ ಠಾಣಾಧಿಕಾರಿ ಕೆ.ಎಂ.ಪುಟ್ಟಮಲ್ಲೇಗೌಡ ಮಾತನಾಡಿದರು. ಗಣ್ಯರು ಹುತಾತ್ಮರ ಸ್ಮಾರಕ ಉದ್ಘಾಟಿಸಿ ಪುಷ್ಪ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net