

ಬಾಗಲಕೋಟೆ: ಸಿಎನ್‌ಜಿ ತುಂಬಿದ್ದ ವಾಹನವೊಂದು ಪಲ್ಟಿಯಾಗಿ ಗ್ಯಾಸ್ ಲೀಕ್ ಆಗುತ್ತಿದ್ದ ಹಿನ್ನಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದ ಘಟನೆ ಮಂಗಳವಾರ ರಾತ್ರಿ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಕ್ರಾಸ್ ಬಳಿ ನಡೆದಿದೆ.
ಆದರೆ, ತಾಂತ್ರಿಕ ತಜ್ಞರ ಸಹಾಯದಿಂದ ವಾಹನದಲ್ಲಿ ಇದ್ದ ಸಿಎನ್‌ಜಿ ಯನ್ನು ಸುರಕ್ಷಿತವಾಗಿ ಖಾಲಿ ಮಾಡಿಸಿ ಯಾವುದೇ ಅಪಾಯ ಇಲ್ಲದೇ ಕಾರ್ಯಾಚರಣೆ ನಡೆಸಲಾಗಿದೆ.
ವಾಹನದಲ್ಲಿ ಒಂದು ಸಾವಿರ ಕೆಜಿ ಸಿಎನ್‌ಜಿ ಇದ್ದು, ವಾಹನ ಪಲ್ಟಿ ಆಗಿದ್ದರಿಂದ ಗ್ಯಾಸ್ ಲೀಕ್ ಆಗತೊಡಗಿತ್ತು. ಇದರಿಂದ ಮುಂಜಾಗೃತ ಕ್ರಮವಾಗಿ ಬನಹಟ್ಟಿ ಪೊಲೀಸರು ಅಲ್ಲಿ ಅಕ್ಕಪಕ್ಕದ ನಿವಾಸಿಗಳನ್ನು ತಾತ್ಕಾಲಿಕವಾಗಿ ಬೇರೆ ಕಡೆಗೆ ಸ್ಥಳಾಂತರ ಮಾಡಿಸಿ, ಆ ಪ್ರದೇಶದಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಬಳಿ ಯಾರು ಬಾರದಂತೆ ತಡೆದಿದ್ದರು.
ಸ್ಥಳದಲ್ಲಿ ರಾತ್ರಿ ಪೂರಾ ಬನಹಟ್ಟಿ ಪೊಲೀಸರು ಠಿಕಾಣಿ ಹೂಡಿದ್ದರು. ಬುಧವಾರ ಬೆಳಗ್ಗೆ ತಾಂತ್ರಿಕ ತಜ್ಞರು ಸ್ಥಳಕ್ಕೆ ಆಗಮಿಸಿ, ವಾಹನದಲ್ಲಿ ಇದ್ದ ಸಿಎನ್‌ಜಿ ಸುರಕ್ಷಿತವಾಗಿ ಹೊರಹಾಕಿ ಯಾವುದೇ ಅಪಾಯ ಉಂಟಾಗದAತೆ ನೋಡಿಕೊಂಡರು. ಬಹನಟ್ಟಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮಂಗಳವಾರ ರಾತ್ರಿ ಜಮಖಂಡಿ ನಗರದಿಂದ ಮಹಾಲಿಂಗಪುರ ಪಟ್ಟಣದ ಕಡೆಗೆ ಹೊರಟಿದ್ದ ಸಿಎನ್‌ಜಿ ತುಂಬಿದ್ದ ವಾಹನ ಪಲ್ಟಿಯಾಗಿತ್ತು.