ಆಷಾಢದ ಮೊದಲ ದಿನವೇ `ಬಾಸಿಂಗಬಲ'

6bgk1 (4)
ಬಾಗಲಕೋಟೆ ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಬಾಸಿಂಗಬಲ ನಾಟಕದ ದೃಶ್ಯ.
Published on

ಬಾಗಲಕೋಟೆ: ಗೋಧೂಳಿಯ ಮೋಡ ಕವಿದ ವಾತಾವರಣದಲ್ಲೂ ಕೂಡಿಬಂದ ಬಾಸಿಂಗಬಲ, ಧರೆಗಿಳಿದ ಶಿವ ಪಾರ್ವತಿಯರು, ಅಪರೂಪದ ಪ್ರೇಮಕಥೆಗೆ ಮನಸೋತ ಕೋಟೆಯ ಜನತೆ..!!

ನಗರದಲ್ಲಿ ಶನಿವಾರ ಸಂಜೆ ಕಂಡುಬಂದ ದೃಶ್ಯಗಳಿವು. ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಂಗಕರ್ಮಿ, ದಿವಂಗತ ಪಿ.ಎ.ಕುಲಕರ್ಣಿ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ವಾಸುದೇವ ವಿನೋದಿನಿ ನಾಟ್ಯ ಸಭೆ ಹಮ್ಮಿಕೊಂಡಿದ್ದ ಬಾಸಿಂಗಬಲ ನಾಟಕ ಕಲಾಪ್ರೇಮಿಗಳನ್ನು ನಗೆಗಡಲಲ್ಲಿ ತೇಲಿಸಿತು.

ಅಣ್ಣನ ಮಗನ ಮದುವೆಗೆ ಬಾಸಿಂಗವನ್ನು ತರಲು ಹೊರಟಿದ್ದ ವಿಧವೆ ಸಣ್ಣೇರಿ, ಅದೇ ಸಮಯಕ್ಕೆ ಅಲ್ಲಿ ಬಂದ ಮಲಕಾಜಿ ನಡುವೆ ಪ್ರೇಮಾಂಕುರವಾದ ಅಪರೂಪದ ಕಥೆ ಖಾಸಗಿ ಬಸ್‌ನಲ್ಲಿ ಮುಂದುವರಿದಾಗ ನೆರೆದವರೆಲ್ಲ ಚೆಪ್ಪಾಳೆಯೊಂದಿಗೆ ಕಲಾವಿದರನ್ನು ಪ್ರೋತ್ಸಾಹಿಸಿದರು. ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಾಗ ಆಕಾಶಮಾರ್ಗವಾಗಿ ಸಂಚರಿಸುತ್ತಿದ್ದ ಶಿವ ಪಾರ್ವತಿ ಧರೆಗಿಳಿದು ಬಂದು ಆಶೀರ್ವದಿಸಿದಾಗ ಸಣ್ಣೇರಿ ಹಾಗೂ ಮಲಕಾಜಿ ನಡುವೆ ಬಾಸಿಂಗಬಲ ಕೂಡಿ ಬಂದು ನಾಟಕಕ್ಕೆ ತೆರೆಬಿದ್ದಾಗ ಚಪ್ಪಾಳೆಗಳ ಸುರಿಮಳೆ.

ಶ್ರೀನಿವಾಸ ವೈದ್ಯರ ಕಥೆ ಆಧರಿಸಿತ ಈ ನಾಟಕವನ್ನು ಜಾಕಿರ್ ನದಾಫ್ ನಿರ್ದೇಶಿಸಿದ್ದರು. ಬೆಳಗಾವಿ ಜಿಲ್ಲೆಯ ಸವದತ್ತಿಯ ರಂಗ ಆರಾಧಾನಾ ಸಾಂಸ್ಕೃತಿಕ ತಂಡದವರು ಮನಮೋಹಕವಾಗಿ ಪ್ರದರ್ಶಿಸಿದರು. ಸೀಮಾ ವನಕಿ, ಅಕ್ಷತಾ ಮೇಲಗಿರಿ, ಕಾಶಪ್ಪ ಜಂಬೂದ್ವೀಪ, ಗೋಪಾಲ ಫಾಸಲಕರ್, ಸಿದ್ದು ಕಟಿಗೆನ್ನನವರ, ಗಣೇಶ ಬಜೇರಿ, ಚಂದ್ರಶೇಖರ ಪಠಾಣಿ, ಶ್ರೀನಿವಾಸ ಗದಗ, ಚಿದಂಬರ ಪಾಟೀಲ, ನಾರಾಯಣ ಗೋಂಧಳಿ ತಮ್ಮ ಕಲೆಯ ಮೂಲಕ ಮನಸೂರೆಗೊಂಡರು. ಆನಂದ ಏಣಗಿ ನಾಟಕ ಪ್ರದರ್ಶನಕ್ಕೆ ಬೆಳಕು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net