

ಹಾವೇರಿ: ಪಟ್ಟಣದ ಸಖಿ ಕೇಂದ್ರ ಹಾಗೂ ಮಹಿಳಾ ಸಾಂತ್ವಾನ ಮತ್ತು ಧ್ವನಿ ಸ್ವಾಧಾರ ಹಾಗೂ ಸ್ಪಂದನ ದತ್ತು ಕೇಂದ್ರಗಳಿಗೆ ಭೇಟಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಆರ್., ಗುರುವಾರ ನೀಡಿ ಪರಿಶೀಲಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಖಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಕೇಂದ್ರದ ಕಾರ್ಯನಿರ್ವಹಣೆ ಕುರಿತು ಕೌನ್ಸೆಲರ್ಗಳೊಂದಿಗೆ ರ್ಚಚಿಸಿ ಮಾಹಿತಿ ಪಡೆದರು.
ಈ ಸಮಯದಲ್ಲಿ ಸಂತ್ರಸ್ತ ಮಹಿಳೆಯರಿಗೆ ಆಶ್ರಯ ವ್ಯವಸ್ಥೆ, ಮೂಲಸೌಕರ್ಯಗಳು, ಶಿಕ್ಷಣ, ಸ್ವಉದ್ಯೋಗ ತರಬೇತಿ ಕುರಿತು ಕೇಂದ್ರದ ಅಧಿಕಾರಿ, ಸಿಬ್ಬಂದಿಯಿಂದ ಮಾಹಿತಿ ಪಡೆದರು. ನಂತರ ಸ್ಪಂದನ ದತ್ತು ಕೇಂದ್ರಕ್ಕೆ ತೆರಳಿ ಪರಿಶೀಲಿಸಿದರು.
ಧ್ವನಿ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಮಹಿಳೆಯರ ಕುಶಲೋಪರಿ ವಿಚಾರಿಸಿದ ಅವರು, ಯಾವುದೇ ಸಂದರ್ಭದಲ್ಲೂ ಹೆದರಬೇಡಿ. ಮಹಿಳಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿಮ್ಮೊಂದಿಗಿದೆ. ಎಲ್ಲ ತರಹದ ರಕ್ಷಣೆ ಹಾಗೂ ನೆರವು ಒದಗಿಸುತ್ತದೆ. ಸರ್ಕಾರದ ವಿವಿಧ ಯೋಜನೆಗಳಡಿ ತಮಗೆ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ನೆರವು ಒದಗಿಸಲಾಗುವುದು. ಧೈರ್ಯದಿಂದ ಪರಿಸ್ಥಿತಿ ಎದುರಿಸಿ ಎಂದರು.
ನಂತರ ಮಾತನಾಡಿದ ಅವರು, ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಾಂತ್ವಾನ ಕೇಂದ್ರಗಳನ್ನು ಸರ್ಕಾರದ ನಿಯಮಾವಳಿಯಂತೆ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿವೆ. ಸರ್ಕಾರ ಅಗತ್ಯ ಅನುದಾನ ಒದಗಿಸುತ್ತದೆ. ಯಾವುದೇ ಮಹಿಳೆ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದರೆ ಸಖಿ, ಸ್ವಾಧಾರ ಮತ್ತು ಸಾಂತ್ವಾನ ಕೇಂದ್ರವನ್ನು ಸಂರ್ಪಸಿ, ನೆರವು ಪಡೆಯಬಹುದು. ಈ ಕೇಂದ್ರವನ್ನು ಸಂರ್ಪಸುವ ಮಹಿಳೆಯರಿಗೆ ಕೌನ್ಸೆಲಿಂಗ್ ನಡೆಸಲಾಗುವುದು. ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗುವುದು. ತಾತ್ಕಾಲಿಕವಾಗಿ ಆಶ್ರಯವನ್ನು ಒದಗಿಸಲಾಗುವುದು. ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕಾರ್ಯನಿವಹಿಸುತ್ತಿರುವ ಸಖಿ, ಸಾಂತ್ವಾನ ಹಾಗೂ ಸ್ವಾಧಾರ ಕೇಂದ್ರಗಳ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿ ಅಗತ್ಯ ಮಾರ್ಗದರ್ಶನ ನೀಡಲು ಇಲ್ಲಿಗೆ ಬಂದಿದ್ದೇನೆ ಎಂದರು.
ನಂತರ ಗುತ್ತಲ ರಸ್ತೆಯಲ್ಲಿರುವ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಭೇಟಿ ನೀಡಿ ನೊಂದ ಮಹಿಳೆಯರಿಗೆ ಸಮಾಲೋಚನೆ ಕ್ರಮಗಳ ಕುರಿತು ಮಾಹಿತಿ ಪಡೆದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ನಗರಸಭೆ ಸದಸ್ಯೆ ಚನ್ನಮ್ಮ ಬ್ಯಾಡಗಿ, ಲಲಿತಾ ಬಡ್ನಿಮಠ, ಸೌಭಾಗ್ಯ ಹಿರೇಮಠ, ಮಂಜುಳಾ ಕರಬಸಮ್ಮನವರ ಹಾಗೂ ಇಲಾಖೆಯ ವಿವಿಧ ಅಧಿಕಾರಿಗಳು, ಸಖಿ, ಸ್ವಾಧಾರ ಹಾಗೂ ಸಾಂತ್ವಾನ ಕೇಂದ್ರಗಳ ಮುಖ್ಯಸ್ಥರುಗಳಿದ್ದರು.