ಆರ್​ಟಿಒ ಕಚೇರಿಗಳಲ್ಲಿ ಮಧ್ಯವರ್ತಿ ಹಾವಳಿ ತಪ್ಪಿಸಿ

6KWR5
Published on

ಕಾರವಾರ: ಲೈಸೆನ್ಸ್ ಹಾಗೂ ಪರವಾನಗಿ ನೀಡುವಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ.ಅವರು ಜಿಲ್ಲೆಯ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಆಯೋಜನೆಯಾಗಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರ್​ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ ಎಂಬ ದೂರುಗಳಿವೆ. ಸಂಚಾರಿ ನಿಯಮ ಹಾಗೂ ಕಾನೂನು ಪ್ರಕಾರ ಕಾರ್ಯನಿರ್ವಹಿಸಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುವ ಆಟೋ ರಿಕ್ಷಾ ಪರವಾನಗಿ ರದ್ದು ಮಾಡಬೇಕು. ಸರ್ಕಾರಿ ಮತ್ತು ಖಾಸಗಿ ವಾಹನಗಳ ಸ್ಥಿತಿಗತಿ ಪ್ರಮಾಣ ಪತ್ರ, ಚಾಲನಾ ಪರವಾನಗಿ ನೀಡುವಲ್ಲಿ ಅನುಸರಿಸಬೇಕಾದ ಮಾನದಂಡ ಹಾಗೂ ಕಾನೂನುಗಳ ಬಗ್ಗೆ ಆರ್​ಟಿಒ ಅಧಿಕಾರಿಗಳಿಗೆ ಪರಿಪೂರ್ಣ ಜ್ಞಾನವಿರಬೇಕು ಎಂದರು.

ಉತ್ತಮ ಸೇವೆ ನೀಡಿ: ಆಟೋ ರಿಕ್ಷಾ, ಕ್ಯಾಬ್ ಚಾಲಕರು, ಕೆಎಸ್​ಆರ್​ಟಿಸಿ ಹಾಗೂ ವಿವಿಧ ಖಾಸಗಿ ಸಾರಿಗೆ ಸಂಸ್ಥೆಗಳ ಸಿಬ್ಬಂದಿ ಪ್ರಯಾಣಿಕರ ಜತೆ ಸೌಜನ್ಯದಿಂದ ವರ್ತಿಸಬೇಕು. ಮಹಾ ನಗರಗಳಂತೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರ ಜತೆ ಉತ್ತಮವಾಗಿ ವ್ಯವಹರಿಸಬೇಕು. ಸಾರಿಗೆ ನಿಯಮವನ್ನು ಪಾಲಿಸಿ ಜಿಲ್ಲೆಗೆ ಹೆಸರು ತರಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇ ಪ್ರಿಯಾಂಗಾ ಉಪಸ್ಥಿತರಿದ್ದರು. ಸಾರಿಗೆ ಅಧಿಕಾರಿಗಳು, ಆಟೋ ರಿಕ್ಷಾ, ಕ್ಯಾಬ್ ಚಾಲಕರ, ಮಾಲೀಕರ ಸಂಘದ ಪದಾಧಿಕಾರಿಗಳು ಸಭೆಯಲ್ಲಿದ್ದರು.

ಅಧಿಕಾರಿ ವಿರುದ್ಧವೂ ಪ್ರಕರಣ : ಪ್ರತಿಯೊಂದು ವಾಹನದ ಸ್ಥಿತಿಗತಿಯನ್ನು ಸಮರ್ಪಕವಾಗಿ ಪರಿಶೀಲನೆ ಮಾಡಿಯೇ ಪರವಾನಗಿ ನೀಡಬೇಕು ಅಥವಾ ಪರವಾನಗಿ ನವೀಕರಿಸಬೇಕು. ವಾಹನಗಳ ದೋಷದಿಂದ ಅಪಘಾತಗಳು ಸಂಭವಿಸಿ ಪ್ರಯಾಣಿಕರಿಗೆ ತೊಂದರೆಯಾದಲ್ಲಿ ಸಂಬಂಧಪಟ್ಟ ಸಂಸ್ಥೆ, ವಾಹನದ ಚಾಲಕ, ಮಾಲೀಕನ ಜತೆ ಆರ್​ಟಿಒ ಅಧಿಕಾರಿಗಳನ್ನೂ ನೇರ ಹೊಣೆಗಾರರನ್ನಾಗಿ ಮಾಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಸ್​ಪಿ ಶಿವಪ್ರಕಾಶ ದೇವರಾಜು ಎಚ್ಚರಿಸಿದರು.

ಕರ್ತವ್ಯ ಅರಿತು ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸಬೇಕು. ತಪ್ಪಿತಸ್ಥರು ಯಾರೇ ಆದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಯಾವುದೇ ಭಾಗದಲ್ಲಿ ಅಪರಾಧ ಪ್ರಕರಣಗಳು ಸಂಭವಿಸುವ ಮುನ್ಸೂಚನೆ ಇದ್ದರೆ ತಕ್ಷಣ ಪೊಲೀಸರಿಗೆ ತಿಳಿಸಬೇಕು. ಇದರಿಂದ ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಲು ಸಾಧ್ಯ. | ಶಿವಪ್ರಕಾಶ ದೇವರಾಜು ಎಸ್​ಪಿ, ಉತ್ತರ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net