ಆರ್ಭಟಿಸುತ್ತಿರುವ ಪುನರ್ವಸು

9KWR2D
Published on

ಕಾರವಾರ: ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಗುರುವಾರ 126 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಹೆದ್ದಾರಿ ಸಂಚಾರಕ್ಕೆ ವ್ಯತ್ಯಯವಾಗಿದೆ.

ಬುಧವಾರ ಇಡೀ ದಿನ ಮಳೆ ಸುರಿದಿದ್ದು, ಗುರುವಾರ ಬೆಳಗ್ಗೆ ಮುದಗಾ, ಅಮದಳ್ಳಿ, ಚೆಂಡಿಯಾ, ತೋಡೂರು, ಭಾಗದಲ್ಲಿ ನೀರು ತುಂಬಿ ಆತಂಕ ಸೃಷ್ಟಿಯಾಗಿತ್ತು. ಮಧ್ಯಾಹ್ನದ ನಂತರ ಮಳೆ ಕಡಿಮೆಯಾಗಿದ್ದು, ನೀರು ತಾನಾಗಿಯೇ ಇಳಿದು ಹೋಗಿದೆ.

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನೀರು ತುಂಬಿದ್ದು, ಸುಮಾರು 3 ತಾಸು ವಾಹನ ಸಂಚಾರ ಸ್ಥಗಿತವಾಗಿತ್ತು. ಎರಡೂ ಕಡೆ ನೂರಾರು ವಾಹನಗಳು ನಿಂತಿದ್ದವು. ಅಮದಳ್ಳಿ ವೀರ ಗಣಪತಿ ದೇವಸ್ಥಾನ, ಮುದಗಾ ಮೇಲಿನ ಕೇರಿ, ಸೀಬರ್ಡ್ ಕಾಲನಿ ಸೇರಿ ಸುಮಾರು 90 ಮನೆಗಳಿಗೆ, ತೋಡೂರಿನ 20 ಮನೆಗಳಿಗೆ ನೀರು ನುಗ್ಗಿತು. ಬಿಣಗಾದಲ್ಲಿ ಒಂದು ಮನೆ ಕುಸಿಯಿತು. ಇದ್ದಕ್ಕಿದ್ದಂತೆ ನೀರು ತುಂಬಿದ್ದರಿಂದ ಮುದಗಾ ಮೇಲಿನ ಕೇರಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಕೆಲವರನ್ನು ಸ್ಥಳೀಯರು ರಕ್ಷಿಸಿದರು.

ಕದ್ರಾದಲ್ಲಿ ನೀರು: ಕದ್ರಾ ಕೆಪಿಸಿ ಲೇಬರ್ ಕಾಲನಿಯಲ್ಲಿ ಚರಂಡಿ ನೀರು ತುಂಬಿ ರಸ್ತೆಯ ಮೇಲೆ ಹರಿಯಿತು. ಕಾಳಿ ನದಿ ನೀರು ಉಕ್ಕಿದ್ದರಿಂದ ಕಿನ್ನರ, ಘಾಡಸಾಯಿ, ಗರ್ಗಲ್, ಆಮ್ಲೆ ಭಾಗದಲ್ಲಿ ಆತಂಕ ಸೃಷ್ಟಿಯಾಗಿತ್ತು. ಕಿನ್ನರದ 6 ಬರ್ಗಲ್​ನ 6, ಘಾಡಸಾಯಿಯ 3, ಗೋಟೆಗಾಳಿಯ 1 ಮನೆಗೆ ನೀರು ನುಗ್ಗಿತು. ಕಳೆದ ವರ್ಷ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರಿಂದ ಈ ಬಾರಿ ಅಲ್ಪಸ್ವಲ್ಪ ನೀರು ಬಂದರೂ ಜನ ಹೆಚ್ಚು ಆತಂಕಗೊಳ್ಳುತ್ತಿದ್ದಾರೆ.

ಗುಡ್ಡ ಕುಸಿತದ ಭೀತಿ: ಅಂಕೋಲಾ ಹಾರವಾಡ ಮೇಲಿನ ಒಕ್ಕಲ ಕೇರಿಯಲ್ಲಿ ಗುಡ್ಡ ಕುಸಿಯುವ ಸಂಭವ ಇರುವುದರಿಂದ ಗುಡ್ಡದ ಬುಡದ ನಾಲ್ಕು ಮನೆಗಳ ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ. ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡುವುದಾಗಿ ತಹಸೀಲ್ದಾರ್ ಉದಯ ಕುಂಬಾರ ತಿಳಿಸಿದರು. ಆದರೆ, ಜನ ತಮ್ಮ ಸಂಬಂಧಿಕರ ಮನೆಗೆ ತೆರಳುವುದಾಗಿ ತಿಳಿಸಿದರು.

ಕಾಮಗಾರಿಯಿಂದ ಕಷ್ಟ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಐಆರ್​ಬಿ ಎಂಬ ಕಂಪನಿಯಿಂದ ಚತುಷ್ಪಥ ಕಾಮಗಾರಿ ನಡೆಸಲಾಗಿದೆ. ಅದು ಅರೆಬರೆಯಾಗಿದ್ದು, ಗುಡ್ಡದಿಂದ ಬಂದ ನೀರು ಸಮುದ್ರಕ್ಕೆ ಹರಿಯಲು ಸರಿಯಾಗಿ ಜಾಗ ಮಾಡಿಕೊಟ್ಟಿಲ್ಲ. ಇನ್ನು ಪಕ್ಕದಲ್ಲಿ ಸೀಬರ್ಡ್ ನೌಕಾ ಯೋಜನೆಯ ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, ಖಾಸಗಿ ಕಂಪನಿಯೊಂದು ವಸತಿ ಸಮುಚ್ಛಯ ನಿರ್ವಿುಸಿದೆ. ನೀರು ಹರಿದು ಹೋಗುತ್ತಿದ್ದ ಪ್ರದೇಶಗಳನ್ನು ಮಣ್ಣು ಹಾಕಿ ಮುಚ್ಚಲಾಗಿದೆ. ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಯಿತು ಎಂಬುದು ಸ್ಥಳೀಯರ ಆರೋಪ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಗುಡ್ಡದ ಮಣ್ಣು ಕರಗಿ ಬಂದು ಅಂಕೋಲಾ ಹಾರವಾಡದ ಗದ್ದೆಗಳಿಗೆ ಗುರುವಾರ ತುಂಬಿಕೊಂಡಿದೆ. ಶಾಸಕಿ ರೂಪಾಲಿ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸೀಬರ್ಡ್ ನೌಕಾ ಯೋಜನೆ ಹಾಗೂ ಐಆರ್​ಬಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದು ತರಾಟೆಗೆ ತೆಗೆದುಕೊಂಡರು. ತಕ್ಷಣ ನೀರು ಹರಿಯಲು ವ್ಯವಸ್ಥೆ ಮಾಡಿಕೊಡುವಂತೆ ಸೂಚಿಸಿದರು.

ಅಣೆಕಟ್ಟೆಗೆ ಹೆಚ್ಚಿನ ನೀರು: ಅಘನಾಶಿನಿ, ಗಂಗಾವಳಿ ನದಿಗಳು ಕೆಂಪು ನೀರು ತುಂಬಿಕೊಂಡು ತಮ್ಮ ಹರಿವಿನ ಹರವನ್ನು ವಿಸ್ತರಿಸಿಕೊಂಡು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಶರಾವತಿ ಹಾಗೂ ಕಾಳಿ ನದಿಯ ಅಣೆಕಟ್ಟೆಗಳಿಗೆ ಒಳ ಹರಿವು ಹೆಚ್ಚಿದೆ. ಸೂಪಾ ಅಣೆಕಟ್ಟೆಗೆ 23,199 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 564 ಮೀಟರ್ ಗರಿಷ್ಠ ಸಂಗ್ರಹಣಾ ಸಾಮರ್ಥ್ಯವಿರುವ ಅಣೆಕಟ್ಟೆಯಲ್ಲಿ 530.95 ಮೀಟರ್ ನೀರು ಸಂಗ್ರಹವಾಗಿದೆ. 2460 ಪೆನ್​ಸ್ಟಾಕ್​ನಿಂದ 2460 ಕ್ಯೂಸೆಕ್ ನೀರು ಹೊರ ಹೋಗುತ್ತಿದೆ. ಕೊಡಸಳ್ಳಿ ಅಣೆಕಟ್ಟೆಗೆ 8043 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 75.50 ಮೀಟರ್ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಅಣೆಕಟ್ಟೆಯಲ್ಲಿ 70.15 ಕ್ಯೂಸೆಕ್ ನೀರು ಸಂಗ್ರಹವಾಗಿದೆ. ಕದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ 133 ಮಿಮೀ ಮಳೆಯಾಗಿದ್ದು, ಅಣೆಕಟ್ಟೆಗೆ 21352 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 34.50 ಮೀಟರ್ ಸಂಗ್ರಹಣಾ ಸಾಮರ್ಥ್ಯ ಹೊಂದಿದ ಅಣೆಕಟ್ಟೆಯಲ್ಲಿ 31.15 ಮೀಟರ್ ನೀರು ಸಂಗ್ರಹವಾಗಿದೆ. ವಿದ್ಯುತ್ ಉತ್ಪಾದನೆ ಮಾಡಿ 19558 ಕ್ಯೂಸೆಕ್ ನೀರು ಹೊರಬಿಡಲಾಗಿತ್ತಿದೆ. 32.50 ಮೀಟರ್ ನೀರು ತುಂಬುತ್ತಿದ್ದಂತೆ ಅಣೆಕಟ್ಟೆಯ ಗೇಟ್​ಗಳನ್ನು ತೆಗೆದು ನೀರು ಹೊರಬಿಡಲಾಗುವುದು ಎಂದು ಈಗಾಗಲೇ ಕೆಪಿಸಿ ಎಚ್ಚರಿಕೆ ನೀಡಿದೆ.

ಮಳೆಯ ಪ್ರಮಾಣ: ಗುರುವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 127, ಭಟ್ಕಳ- 80, ಹಳಿಯಾಳ- 3.2, ಹೊನ್ನಾವರ-82.7, ಕಾರವಾರ-51.8, ಕುಮಟಾ-51.6, ಮುಂಡಗೋಡ-12.2, ಸಿದ್ದಾಪುರ- 62.2, ಶಿರಸಿ- 68, ಜೊಯಿಡಾ-31.8, ಯಲ್ಲಾಪುರದಲ್ಲಿ 44 ಮಿಮೀ ಮಳೆಯಾಗಿದೆ.

ಕಾರಿನ ಮೇಲೆ ಬಿದ್ದ ಮರ: ಅಂಕೋಲಾದ ಕೇಣಿಯಲ್ಲಿ ನಿಲ್ಲಿಸಿಟ್ಟ ಎರಡು ಕಾರುಗಳ ಮೇಲೆ ಬೃಹತ್ ಮರವೊಂದು ಗುರುವಾರ ಮಧ್ಯಾಹ್ನದ ಹೊತ್ತಿಗೆ ಬುಡ ಸಮೇತ ಕಿತ್ತು. ಬಿದ್ದಿವೆ. ಗಿರೀಶ ಶೆಟ್ಟಿ, ಮಹೇಶ ದುರ್ಗೆಕರ್ ಎಂಬುವವರಿಗೆ ಸೇರಿದ ಎರಡೂ ಕಾರುಗಳು ಸಂಪೂರ್ಣ ಜಕಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಭಾರಿ ಮಳೆ ಮುನ್ನೆಚ್ಚರಿಕೆ: ಜುಲೈ 12 ರವರೆಗೆ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಗರಿಷ್ಠ 115 ಮಿಮೀಗಿಂತ ಹೆಚ್ಚು ಮಳೆಯಾಗಲಿದೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net