ಆರ್ಥಿಕ ಕೊರತೆ ಎದುರಿಸುತ್ತಿವೆ ಕ್ರೀಡಾ ಇಲಾಖೆಗಳು

28HLY-1
Published on

ಹಳಿಯಾಳ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸರ್ಕಾರಗಳು ಸೂಕ್ತ ಪ್ರಾಮುಖ್ಯತೆ ನೀಡದ್ದರಿಂದ ಅವು ಆರ್ಥಿಕ ಕೊರತೆ ಎದುರಿಸುತ್ತಿವೆ. ಹೀಗಾಗಿ ಕ್ರೀಡಾ ಚಟುವಟಿಕೆಗಳಿಗೆ ಸಮಸ್ಯೆಯಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ನಿಲಯದಲ್ಲಿ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2019-20ನೇ ಸಾಲಿನ ವಿಶೇಷ ಕ್ರೀಡಾ ತರಬೇತಿಯಲ್ಲಿ ಭಾಗವಹಿಸಿದ ತಾಲೂಕಿನ ಸಿದ್ದಿ ಜನಾಂಗದ 300 ಮಕ್ಕಳಿಗೆ ಭಾನುವಾರ ಕ್ರೀಡಾ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಮೆರಿಕಾ, ರಷ್ಯಾ, ಚೀನಾ, ಜಪಾನ್, ಇಂಗ್ಲೆಂಡ್, ಜರ್ಮನಿ ಇತರ ರಾಷ್ಟ್ರಗಳು ದೇಶದ ಅಭಿವೃದ್ಧಿ ಜತೆಗೆ ಕ್ರೀಡೆಗೂ ಹೆಚ್ಚು ಮಹತ್ವ ನೀಡುತ್ತಿವೆ. ಇದರಿಂದ ಕ್ರೀಡಾ ಕ್ಷೇತ್ರದಲ್ಲಿ ಅವು ಉನ್ನತ ಸ್ಥಾನದಲ್ಲಿವೆ ಎಂದರು.

ದೈಹಿಕ ಸಾಮರ್ಥ್ಯ ಹೊಂದಿರುವ ಸಿದ್ದಿ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ನೀಡಿದರೆ ಉತ್ತಮ ಸಾಧನೆ ಮಾಡುತ್ತಾರೆ. ಹಳಿಯಾಳ ವಿಧಾನಸಭಾ ಕ್ಷೇತ್ರ ಸೇರಿ ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಯಲ್ಲಿನ ಸಿದ್ದಿ ಕ್ರೀಡಾಪಟುಗಳನ್ನು ಗುರುತಿಸಿ ಕ್ರೀಡಾ ಇಲಾಖೆ ತರಬೇತಿ ನೀಡಬೇಕು. ಇದಕ್ಕೆ ಸಹಕಾರ ನೀಡುವುದಾಗಿ ದೇಶಪಾಂಡೆ ಭರವಸೆ ನೀಡಿದರು.

ವಿಪ ಸದಸ್ಯ ಎಸ್.ಎಲ್. ಘೊಟ್ನೆಕರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿದೇರ್ಶಕ ಎಂ.ಜಿ. ರಮೇಶ ಮಾತನಾಡಿದರು. ರಾಜ್ಯ ಕ್ರೀಡಾ ವಿಜ್ಞಾನ ಕೇಂದ್ರದ ನಿರ್ದೇಶಕ ಅಂತೋನಿ ಚಾಕೋ, ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ಪುರಸಭೆ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ ಕೊರ್ವೆಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ ಕೊರ್ವೆಕರ, ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ, ತಹಸೀಲ್ದಾರ್ ಪ್ರವೀಣ ಹುಚ್ಚಣವರ, ಕ್ರೀಡಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ, ಕ್ರೀಡಾ ವಸತಿ ನಿಲಯದ ತುಕಾರಾಮ ಗೌಡ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net