ಆರ್‌ಟಿಐ ಕಾಯ್ದೆ ಅಧ್ಯಯನ ಅಗತ್ಯ

bkt-24-6
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಹಳೆಯ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಮಾಹಿತಿ ಹಕ್ಕು ಆಯೋಗದ ಆಯುಕ್ತ ರವೀಂದ್ರ ಗುರುನಾಥ ದಾಖಪ್ಪನವರ ಸಂವಾದ ನಡೆಸಿದರು. ಸಿಇಒ ಶಶಿಧರ ಕುರೇರ ಇದ್ದರು.
Published on

ಬಾಗಲಕೋಟೆ: ಆರ್‌ಟಿಐ ಕಾಯ್ದೆ ಕುರಿತು ಅಧಿಕಾರಿಗಳು ಅಧ್ಯಯನ ಮಾಡುವುದು ಅತ್ಯಗತ್ಯವಾಗಿದೆ ಎಂದು ಕಲಬುರ್ಗಿ ಪೀಠ ಮಾಹಿತಿ ಹಕ್ಕು ಆಯೋಗದ ಆಯುಕ್ತ ರವೀಂದ್ರ ಗುರುನಾಥ ದಾಖಪ್ಪನವರ ಹೇಳಿದರು.

ಜಿಲ್ಲಾ ಪಂಚಾಯಿತಿ ಹಳೆಯ ಸಭಾಂಗಣದಲ್ಲಿ ಶುಕ್ರವಾರ ಸಂಜೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಬಹುತೇಕ ಇಲಾಖೆಯ ಮುಖ್ಯಸ್ಥರು, ಅಧಿಕಾರಿಗಳು ಕೆಲಸದ ಒತ್ತಡದಲ್ಲಿ ಮಾಹಿತಿ ಹಕ್ಕು ಕಾಯಿದೆ ಕುರಿತು ಅಧ್ಯಯನ ಮಾಡದೇ, ತಮ್ಮ ಅಧೀನ ಸಿಬ್ಬಂದಿ ಅಥವಾ ಕೇಸ್ ವರ್ಕರ್ ಹೇಳುವ ಮಾತಿನ ಆಧಾರದ ಮೇಲೆ ಅರ್ಜಿದಾರನಿಗೆ ಮಾಹಿತಿ ನೀಡಿ ಅನಗತ್ಯವಾದ ಗೊಂದಲವನ್ನು ಮಾಡಿಕೊಂಡಿರುವುದು ಸಾಕಷ್ಟು ಕಾಣಬಹುದಾಗಿದೆ. ಆರ್‌ಟಿಐ ಕಾಯಿದೆ ಕುರಿತು ಅಧ್ಯಯನ ಮಾಡಿ ಸಂಪೂರ್ಣವಾಗಿ ಅರಿತುಕೊಂಡಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಉದ್ಬವಿಸುವದಿಲ್ಲ ಎಂದು ತಿಳಿಸಿದರು.

ಮಾಹಿತಿ ಕೇಳುವ ಅರ್ಜಿದಾರನಿಗೆ, ಕಾನೂನು ಅಡಿಯಲ್ಲಿ ಬರುವಂತಹ ವಿಷಯಗಳಿದ್ದಲ್ಲಿ ೩೦ ದಿನದೊಳಗೆ ನೋಂದಾಯಿತ ಅಂಚೆ ಮೂಲಕ ಮಾಹಿತಿ ನೀಡಬೇಕು. ವ್ಯಕ್ತಿಯ ವಯಕ್ತಿಕ ವಿಷಯಗಳಿದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ಇದ್ದರೂ ಮಾಹಿತಿ ನೀಡಲು ಬರುವದಿಲ್ಲ. ಮಾಹಿತಿ ನೀಡುವ ಮುನ್ನ, ಯಾವ ಕಲಂ ಏನು ಹೇಳುತ್ತದೆ ಎಂಬುದನ್ನು ಸಂಪೂರ್ಣವಾಗಿ ಅರಿತು ಸಾಕಸ್ಟು ವಿಚಾರ ಮಾಡಿ ಕಾಯ್ದೆಗೆ ಅನುಗುಣವಾಗಿ ಮಾಹಿತಿ ನೀಡುವ ಕೆಲಸ ಮಾಡಬೇಕು ಇಲ್ಲಿ ಹೆದರುವ ಅವಶ್ಯಕತೆ ಇರುವದಿಲ್ಲ ಎಂದರು.

ಕಚೇರಿಯಲ್ಲಿ ಕಡತಗಳನ್ನು ಸರಿಯಾಗಿ ನಿರ್ವಹಿಸಿದ್ದಲ್ಲಿ ಅರ್ಜಿದಾರನಿಗೆ ಮಾಹಿತಿ ನೀಡುವ ಕೆಲಸ ಸುಲಭವಾಗುವದರಿಂದ ಕಡತಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ಕಚೇರಿಯಲ್ಲಿ ಅಽಕಾರಿಗಳು ಮತ್ತು ಸಿಬ್ಬಂದಿ ನಡುವೆ ಒಗ್ಗಟ್ಟು ಇಲ್ಲದೇ ಇದ್ದಾಗ ಮಾಹಿತಿ ಕೇಳುವ ಅರ್ಜಿದಾರರ ಸಂಖ್ಯೆಯು ಹೆಚ್ಚಾಗಿ ಸಮಸ್ಯೆಗಳು ಉದ್ಬವಿಸುವ ಸನ್ನಿವೇಶ ಉಂಟಾಗಬಹುದು. ಕಚೇರಿ ಕೆಲಸಗಳಲ್ಲಿ ಉದಾಸೀನತೆ ತೋರದೆ ಸರಿಯಾಗಿ ಸಕರಾತಮ್ಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net