ಆರ್‌ಎಸ್‌ಎಸ್ ಚಟುವಟಿಕೆಗಳು ಕಾನೂನುಬಾಹಿರ

Published on

ಶನಿವಾರಸಂತೆ: ಪ್ರಿಯಾಂಕ್ ಖರ್ಗೆ ಅವರ ಮನೆಗೆ ನುಗ್ಗುತ್ತೇವೆ ಎಂದು ಬೆದರಿಕೆ ಹಾಕಿರುವ ಬಿಜೆಪಿ ಮುಖಂಡ ಮಣಿಕಾಂತ್ ರಾಥೋಡ್ ಗೂಂಡಾಗಿರಿ ನಡೆಯನ್ನು ಡಿಎಸ್‌ಎಸ್ ಸಂಯೋಜಕ ಬಣ ಖಂಡಿಸುತ್ತದೆ ಎಂದು ದಸಂಸ ಸಂಯೋಜಕ ಬಣದ ಜಿಲ್ಲಾ ಸಂಚಾಲಕ ಎಂ.ಎ.ರಾಜಪ್ಪ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಎತ್ತಿರುವ ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಬಿಜೆಪಿ ಮುಖಂಡರು ಹತಾಶೆಯಲ್ಲಿದ್ದಾರೆ. ದೇಶದ ಕಾನೂನಿನಡಿ ನೋಂದಣಿಯಾಗದಿರುವ ಆರ್‌ಎಸ್‌ಎಸ್ ಸರ್ಕಾರಿ, ಅನುದಾನಿತ ಶಾಲಾ ಕಾಲೇಜು ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ದೊಣ್ಣೆ ಹಿಡಿದು ಪಥಸಂಚಲನ ಸೇರಿದಂತೆ ಇನ್ನಿತರ ಜನವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಾನೂನುಬಾಹಿರವಾಗಿದೆ. ದೇಶದ ಸ್ವಾತಂತ್ರ ಹೋರಾಟದಲ್ಲಿ ಎಂದೂ ಭಾಗವಹಿಸದ ತ್ರಿವರ್ಣ ಧ್ವಜ, ರಾಷ್ಟ್ರಗೀತೆ ಮತ್ತು ಸಂವಿಧಾನವನ್ನು ಒಪ್ಪದ, ಹಿಂದುತ್ವದ ಹೆಸರಲ್ಲಿ ಜನರ ಮನಸಿನಲ್ಲಿ ಜಾತಿಯತೆ, ಮತೀಯತೆ ಮೌಢ್ಯತೆ, ಮೂಢನಂಬಿಕೆಗಳ ವಿಷಬೀಜ ಬಿತ್ತುತ್ತಿದೆ. ಆರ್‌ಎಸ್‌ಎಸ್ ಎಂದೂ ದಲಿತರ ಪರ, ಸಮಾನತೆಯ ಪರ, ಸಮಾಜದ ಪರ, ಸಹೋದರತೆ ಪರ ಹೋರಾಟ ಮಾಡಿಲ್ಲ. ಕೇವಲ ಒಂದೇ ಧರ್ಮದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾ ಸಮಾಜದಲ್ಲಿ ಕೋಮು ಹಿಂಸಾ ಕೃತ್ಯಗಳಿಗೆ ಪ್ರೇರೇಪಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸಂಘಟನಾ ಸಂಯೋಜಕ ರಾಜಶೇಖರ್ ಮಾತನಾಡಿ, ಸಮಾಜದಲ್ಲಿ ಸಂಘ-ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ಇದೆ. ಇವುಗಳನ್ನು ಕಾನೂನಾತ್ಮಕವಾಗಿ ನೋಂದಣಿ ಮಾಡಿಸುತ್ತಾರೆ. ಆದರೆ, ಆರ್‌ಎಸ್‌ಎಸ್ ನೋಂದಣಿ ಮಾಡಿಸದಿರುವ ಬಗ್ಗೆ ಮತ್ತು ಈ ಸಂಘಕ್ಕೆ ಎಲ್ಲಿಂದ ಹಣ ಬರುತ್ತದೆ ಎಂಬುವುದರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಸೈದ್ಧಾಂತಿಕವಾಗಿ ಪ್ರಶ್ನಿಸಿದ್ದಾರೆ. ಆದರೆ, ಈ ಕುರಿತು ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಸ್ಪಷ್ಟನೆ ನೀಡಲು ಸಾಧ್ಯವಾಗದೆ ಸಚಿವರಿಗೆ ಬೆದರಿಕೆ ಹಾಕಿದ್ದಾರೆ. ಆರ್‌ಎಸ್‌ಎಸ್ ಸಚಿವರಿಗೆ ಮತ್ತು ಸರಕಾರಕ್ಕೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ಎಂ.ಇ.ಪೊನ್ನಪ್ಪ, ಜಿಲ್ಲಾ ಸಂಚಾಲಕ ಎಚ್.ಸಿ.ರಾಜಪ್ಪ, ತಾಲೂಕು ಸಂಚಾಲಕ ಚಂದ್ರಶೇಖರ್, ಜಿಲ್ಲಾ ಖಜಾಂಜಿ ವೀರಭದ್ರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net