ಆರೋಪಿಗಳು ಖುಲಾಸೆ

Published on

ವಿರಾಜಪೇಟೆ: ಚಿಟ್ಟಡೆ ಗ್ರಾಮದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನ್ಸಿಪಲ್ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಟ್ಟಡೆ ಗ್ರಾಮದಲ್ಲಿ ಪೊಲೀಸರು ಜೀಪಿನಲ್ಲಿ ಸರ್ಕಾರಿ ಕರ್ತವ್ಯಕ್ಕೆ ತೆರಳಿದ ಸಂದರ್ಭ, ಸುಮಾರು 26 ಜನರು ಕಲ್ಲು, ದೊಣ್ಣೆಗಳಿಂದ ಹಲ್ಲೆ ನಡೆಸಿ ಪೊಲೀಸ್ ಜೀಪನ್ನು ಅಡ್ಡಗಟ್ಟಿ ಕರ್ತವ್ಯದಲ್ಲಿದ್ದ ಎಎಸ್‌ಐ ಡಿ.ವಿ. ಕಾರ್ಯಪ್ಪ ಹಾಗೂ ಪುರುಷ ಹಾಗೂ ಮಹಿಳಾ 8 ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸ್ ಜೀಪನ್ನು ಜಖಂಗೊಳಿಸಿದ್ದರು. ಪ್ರಕರಣದ ಸಾಕ್ಷಿ ವಿಚಾರಣೆ ನಡೆಸಿದ ವಿರಾಜಪೇಟೆ ಮುನ್ಸಿಪಲ್ ನ್ಯಾಯಾಧೀಶರಾದ ಪ್ರದೀಪ್ ಪೋತೆದಾರ್ ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶ ನೀಡಿರುತ್ತಾರೆ.

2010ರ ಏಪ್ರಿಲ್ 12ರಂದು ಚಿಟ್ಟಡೆ ಗ್ರಾಮಕ್ಕೆ ಪ್ರಕರಣವೊಂದರ ಸಂಬಂಧ ಆರೋಪಿಗಳ ಪತ್ತೆಗೆ ತೆರಳಿದ ಸಂದರ್ಭ ಚಿಟ್ಟಡೆ ಗ್ರಾಮಸ್ಥರಾದ ವೈ.ಇ.ರಫೀಕ್ ಹಾಗೂ ಇತರ 25 ವ್ಯಕ್ತಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರವನ್ನು ಪೊಲೀಸರು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ತೀರ್ಮಾನಿಸಿ ಆರೋಪಿಗಳನ್ನು ಬಿಡುಗಡೆಗೊಳಿಸಿದೆ. ಆರೋಪಿಗಳ ಪರವಾಗಿ ವಕೀಲ ಡಿ.ಸಿ.ಧ್ರುವ ವಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net