

ಬಾಗಲಕೋಟೆ: ಹಿನ್ನೀರು ಪ್ರದೇಶದಲ್ಲಿ ಮುಳಗಡೆಯಾದ ಬಿವಿವಿ ಸಂಘದ ವಿವಿಧ ಸಂಸ್ಥೆಗಳು, ದೇವಸ್ಥಾನಗಳಿಗೆ ನವನಗರದಲ್ಲಿ ಕಾನೂನು ಬದ್ಧವಾಗಿ ನಿಯಮಾನುಸಾರ ಸೆಕ್ಟರ್ ೫೯ ಭೂಮಿ ಪಡೆದುಕೊಳ್ಳಲಾಗಿದೆ. ಎಎಪಿ ಮುಖಂಡ ರಮೇಶ ಬದ್ನೂರ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮೋಟಗಿ ಬಸವೇಶ್ವರ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಹುಂಡೇಕಾರ ಅಡಿವಿಸ್ವಾಮಿ ಮಠ, ನೇಯ್ಗೆ ಶಾಲೆ ಮುಳಗಡೆಯಾಗಿದ್ದವು, ಅಲ್ಲದೆ ಸಂಘವು ೨೫೩ ಎಕರೆ ೫ ಗುಂಟೆಯನ್ನು ಸರ್ಕಾರದಿಂದ ೧೯೬೮ ರಿಂದ ೧೯೯೮ರ ವರೆಗೆ ಲೀಸ್ ಪಡೆಯಲಾಗಿತ್ತು. ನವನಗರಕ್ಕೆ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ, ಟ್ಯಾಂಕ್ ನಿರ್ಮಾಣಕ್ಕೆ ೮,೯ ಎಕರೇ ಜಮೀನು ಕಳೆದುಕೊಂಡಿದ್ದೇವು. ಅದಕ್ಕೆ ನವನಗರದಲ್ಲಿ ಭೂಮಿ ಪಡೆದುಕೊಳ್ಳಲಾಗಿದೆ.
ಅನೇಕ ಸಂಸ್ಥೆಗಳು ಮುಳಗಡೆಯಾಗದೇ ಎಕರೇ ಗಟ್ಟಲೆ ಜಮೀನು ಪಡೆದುಕೊಂಡಿವೆ. ಬಿವಿವಿ ಸಂಘವನ್ನು ಟಾರ್ಗೆಟ್ ಮಾಡುವುದು. ಕೇವಲ ಜಾತಿ ರಾಜಕಾರಣಕ್ಕೆ ಹೇಳಿಕೆ ನೀಡುವುದು ತರವಲ್ಲ. ಇನ್ನೊಮ್ಮೆ ಇಂತಹುಗಳಿಗೆ ಪ್ರತಿಕ್ರಿಯೆ ನೀಡುವದಿಲ್ಲ ಎಂದರು.
ದೇವಸ್ಥಾನಗಳ ಸಮುಚ್ಛಯ ನಿರ್ಮಾಣ
ನವನಗರದ ಸೆಕ್ಟರ್ ೫೯ ರಲ್ಲಿ ಪಡೆದಿರುವ ಜಾಗದಲ್ಲಿ ಮೋಟಗಿ ಬಸವೇಶ್ವರ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಹುಂಡೇಕಾರ ಅಡಿವಿಸ್ವಾಮಿ ಮಠ, ನೇಯ್ಗೆ ಶಾಲೆ ನಿರ್ಮಾಣ ಮಾಡಲಾಗುವುದು. ರಾಜಸ್ಥಾನ, ಮಂಗಳೂರು ಶೈಲಿ ಶಿಲ್ಪಗಳ ಕೆತ್ತನೆ ಮಾಡಿ ದೇವಸ್ಥಾನ ನಿರ್ಮಿಸಲಾಗುವುದು. ಅಲ್ಲದೆ ಸಂಸ್ಕೃತ ಪಾಠ ಶಾಲೆ, ವೇದ ಪಾಠ ಶಾಲೆ ಸೇರಿದಂತೆ ವಿವಿಧ ಪಾಠ ರೀತಿಯ ಭಾರತೀಯ ಸಂಸ್ಕೃತಿ ಬಿಂಬಿಸುವ ದೇವಾಲಯ ಸಮುಚ್ಛಯ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.