

ಅರಸೀಕೆರೆ ಗ್ರಾಮಾಂತರ: ವಿದ್ಯೆ ನಮ್ಮ ಬದುಕನ್ನು ವಿಕಾಸಗೊಳಿಸಿದರೆ ಆರೋಗ್ಯ ಪೂರ್ಣ ಜೀವನಶೈಲಿ ನಮ್ಮ ಬದುಕು ಸದೃಢವಾಗಿ ಸಾಗುವಂತೆ ಮಾಡುತ್ತದೆ ಎಂದು ದಂತವೈದ್ಯೆ ಡಾ.ಹೇಮಾ ತಿಳಿಸಿದರು.
ರೋಟರಿ ಇನ್ನರ್ ವ್ಹೀಲ್ ಸಂಸ್ಥೆ ವತಿಯಿಂದ ನಗರದ ಹೊರ ವಲಯದ ಕಾಳನಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ದಂತ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನ ದೇಹದಲ್ಲಿ ಪ್ರತಿಯೊಂದು ಅಂಗವೂ ಅದರದೇ ಆದ ಪ್ರಾಮುಖ್ಯ ಹೊಂದಿರುತ್ತದೆ. ಅದಕ್ಕೆ ನಮ್ಮ ದಂತ ಹೊರತಾಗಿಲ್ಲ. ಇತರ ಅಂಗಾಂಗಗಳ ಆರೋಗ್ಯವೂ ನಮ್ಮ ದಂತಗಳ ಮೇಲೆ ಅವಲಂಬಿತವಾಗಿರುತ್ತವೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ಅದನ್ನು ಅರಿತು ಹಲ್ಲುಗಳಲ್ಲಿ ಕಾಣಿಸಿಕೊಳ್ಳುವ ತೊಂದರೆಗಳನ್ನು ಆರಂಭದಲ್ಲಿ ಗುಣಪಡಿಸಿಕೊಳ್ಳುವ ಜಾಣ್ಮೆ ಹೊಂದಿದ್ದರೆ ನಿಮ್ಮ ಭವಿಷ್ಯ ಉತ್ತಮ ಆರೋಗ್ಯದಿಂದ ಕೂಡಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇನ್ನರ್ ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ರಂಜಿತಾ ವಿನಯ್ ಮಾತನಾಡಿ, ರೋಟರಿ ಇನ್ನರ್ ವ್ಹೀಲ್ ಸಂಸ್ಥೆಯು ಸಾಮಾಜಿಕ ಕಳಕಳಿಯೊಂದಿಗೆ ಸಾರ್ವಜನಿಕ ಆರೋಗ್ಯ, ಶಿಕ್ಷಣ, ಪರಿಸರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜದ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ ಎಂದರು.
ಜುಲೈ 4ರಂದು ನಗರದ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ಅಲಂಕೃತಿ ಮಹಾಮೇಳವನ್ನು ಇನ್ನರ್ ವ್ಹೀಲ್ ಸಂಸ್ಥೆ ಆಯೋಜಿಸಿದ್ದು, ಈ ಮೇಳದಿಂದ ಬರುವ ಲಾಭವನ್ನು ಸಂಪೂರ್ಣವಾಗಿ ಅಂಧ ಮಕ್ಕಳ ಕಲ್ಯಾಣಕ್ಕೆ ನೀಡಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಇನ್ನರ್ ವ್ಹೀಲ್ ಸಂಸ್ಥೆಯ ಕಾರ್ಯದರ್ಶಿ ರೇಷ್ಮಾ ರೈ, ಖಜಾಂಚಿ ಲಕ್ಷ್ಮೀ ಪ್ರಶಾಂತ್, ಶ್ವೇತಾ ಅನಿಲ್, ಶ್ವೇತಾ ಮೋಹನ್ ಮತ್ತಿತರರು ಹಾಜರಿದ್ದರು.