

ಮದ್ದೂರು: ಅತಿಯಾದ ಪ್ಲಾಸ್ಟಿಕ್ ಬಳಸಿ ಪರಿಸರ ನಾಶ ಮಾಡುವುದರಿಂದ ಹಲವು ರೀತಿಯಲ್ಲಿ ದುಷ್ಪರಿಣಾಮಗಳು ಮನುಷ್ಯನ ಆರೋಗ್ಯ ಹಾಗೂ ಪರಿಸರದ ಮೇಲೆ ಬೀರುತ್ತವೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಬೆಸಗರಹಳ್ಳಿಯ ತಾಯಮ್ಮ ಚನ್ನೇಗೌಡ ಪ್ರೌಢಶಾಲೆಯಲ್ಲಿ ಸೋಮವಾರ ಅಡ್ವೋಕೇಟ್ಸ್ ಆಫ್ ಅಲಯನ್ಸ್ ಮದ್ದೂರು ಹಾಗೂ ಮಂಡ್ಯದ ಕೃಷಿಕ ಅಲಯನ್ಸ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಸಸ್ಯೋತ್ಸವ ಹಾಗೂ ಬ್ಯಾಂಡ್ ಸೆಟ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಸರದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಕಾಳಜಿವಹಿಸಬೇಕು. ಪ್ಲಾಸ್ಟಿಕ್ ಬಳಕೆ ಬಿಟ್ಟು ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಬಳಸಬೇಕು. ಎಲ್ಲರೂ ತಮ್ಮ ಹುಟ್ಟುಹಬ್ಬದ ದಿನ ಕನಿಷ್ಠ 2 ಗಿಡಗಳನ್ನು ನೆಟ್ಟು ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇತರರಿಗೂ ಹೆಚ್ಚು ಗಿಡಗಳನ್ನು ಬೆಳೆಸಲು ಪ್ರೇರೇಪಿಸಬೇಕು, ಆಗಮಾತ್ರ ಉತ್ತಮ ಪರಿಸರ ಹೊಂದಲು ಸಾಧ್ಯವಾಗುತ್ತದೆ ಅದರಿಂದ ಹೆಚ್ಚು ಮಳೆ, ಮಳೆಯಿಂದ ಬೆಳೆ ಯಾಗುತ್ತದೆ ಎಂದರು.
ಪ್ಲಾಸ್ಟಿಕ್ ಉಪಯೋಗಿಸುವುದು ಹಾಗೂ ಮಾರಾಟ ಮಾಡುವುದು ಕಂಡುಬಂದರೆ ಅವರಿಗೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಬೇಕು ಎಂದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆ ಬಿಟ್ಟು ನಿರಂತರವಾಗಿ ಶ್ರಮಪಟ್ಟು ಓದುವ ಹಾಗೂ ಗುರು ಹಿರಿಯರಿಗೆ ಗೌರವ ಕೊಡುವ ಸಂಸ್ಕಾರ ಬೆಳೆಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಸಲಹೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಎ.ಟಿ.ರಾಮೇಗೌಡ ಮಾತನಾಡಿ, ಬೆಸಗರಹಳ್ಳಿ ಗ್ರಾಮದ ಕೆಂಪೇಗೌಡರ ಚನ್ನೇಗೌಡ ರಾಷ್ಟ್ರೀಯ ವಿದ್ಯಾಲಯಕ್ಕೆ ಹಲವಾರು ವರ್ಷಗಳ ಇತಿಹಾಸವಿದ್ದು, ಶಾಲೆಯಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಣ ನೀಡುತ್ತಿದೆ. ಇದರಿಂದ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಗಮನಾರ್ಹ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಲಯನ್ಸ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಟಿ.ನಾಗರಾಜು, ಸಂಸ್ಥೆಯ ನಿವೃತ್ತ ಉಪನ್ಯಾಸ ಪ್ರೊ. ಶಿವಕುಮಾರ್, ವಕೀಲ ಮಹೇಶ್, ಸಂಸ್ಥೆಯ ಕಾರ್ಯದರ್ಶಿ ಎ.ಟಿ.ರಾಮೇಗೌಡ, ನಿರ್ದೇಶಕರಾದ ಕೆ.ಪ್ರಕಾಶ್, ಮುಖ್ಯಶಿಕ್ಷಕರಾದ ಶ್ರೀನಿವಾಸ್‌ರಾವ್, ಶ್ರೀಧರ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.