ಆರೋಗ್ಯ ಸೇವೆಗಳ ಬಗ್ಗೆ ಅರಿವು ಮೂಡಿಸಿ

bkt-18-2
Published on

ಬಾಗಲಕೋಟೆ: ಆರೋಗ್ಯ ಇಲಾಖೆಯಡಿ ಬರುವ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯವಾಗಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಗಿರುವ ಜಿ.ಪಂ ಆಡಳಿತಾಧಿಕಾರಿ ಮೊಹಮ್ಮದ ಮೋಸಿನ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಜಿಲ್ಲಾ ಪಂಚಾಯತಿಯ ಜುಲೈ ಮಾಹೆಯ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿವಿಧ ಇಲಾಖೆಯ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವಾಗಬೇಕು. ಆರೋಗ್ಯ ಇಲಾಖೆಯಲ್ಲಿ ಬಹಳಷ್ಟು ಸೇವೆಗಳಿದ್ದು, ಅವುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.

ಕೃಷಿ ಇಲಾಖೆಗೆ ಸಂಬಂಧಿಸಿದಿ ಮಳೆ ವಿವರ, ಬಿತ್ತನೆ ಪ್ರಮಾಣ, ಬೀಜ, ರಸಗೊಬ್ಬರ ವಿತರಣೆ ಹಾಗೂ ಬೆಳೆ ವಿಮೆಯ ಬಗ್ಗೆ ಮಾಹಿತಿ ಪಡೆದ ಆಡಳಿತಾಧಿಕಾರಿಗಳು ಪ್ರಸಕ್ತ ಸಾಲಿಗೆ ರೈತ ಮೃತ ಪ್ರಕರಣಗಳಲ್ಲಿ 10 ಪೈಕಿ 3 ಪ್ರಕರಣಗಳಿಗೆ ಮಾತ್ರ ಪರಿಹಾರ ವಿತರಿಸಿದ್ದು, ಉಳಿದ ಪ್ರಕರಣಗಳಿಗೆ ತುರ್ತಾಗಿ ಪರಿಹಾರ ವಿತರಣೆಗೆ ಕ್ರಮವಹಿಸಲು ಸೂಚಿಸಿದರು. ತೋಟಗಾರಿಕೆ ಬೆಳೆಗಳಲ್ಲಿ ಜುಲೈ ಅಂತ್ಯಕ್ಕೆ 25.85 ಸಾವಿರ ಹೆಕ್ಟೇರ್‍ನಷ್ಟು ಬಿತ್ತನೆಯಾಗಿದ್ದು, ನರೇಗಾ ಯೋಜನೆಯಡಿ 30 ಲಕ್ಷ ಮಾನವ ದಿನಗಳ ಗುರಿಗೆ 41.11 ಸಾವಿರ ಸಾಧಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ ಸಭೆಗೆ ತಿಳಿಸಿದರು.

ಅರಣ್ಯ ಇಲಾಖೆಯವರು ರೈತರಿಗೆ ಹೆಚ್ಚಾಗಿ ಸಸಿಗಳನ್ನು ವಿತರಿಸಬೇಕು. ಅಲ್ಲದೇ ಶಾಲಾ, ಅಂಗನವಾಡಿ ಕೇಂದ್ರಗಳ ಆವರಣಗಳಲ್ಲಿ ಸಸಿಗಳನ್ನು ನೆಡಲು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಶು ಅಭಿವೃದ್ದಿ ಅಧಿಕಾರಿಗಳು ಕ್ರಮವಹಿಸಬೇಕು. ನೇರಾಗದಡಿ ಮಾನವ ದಿನಗಳ ಸೃಜನೆಯಲ್ಲಿ ಬಾಗಲಕೋಟೆ, ಬೀಳಗ ಮತ್ತು ಮುಧೋಳ ತಾಲೂಕು ಹಿಂದುಳಿದಿದ್ದು, ಪ್ರಗತಿ ಸಾಧಿಸಲು ಸೂಚಿಸಿದರು. ಬಸವ ವಸತಿ, ಅಂಬೇಡ್ಕರ ನಿವಾಸ್ ಯೋಜನೆ ಮತ್ತು ಪಿಎಂಎವಾಯ್ ಯೋಜನೆಗಳಡಿ ನಿರ್ಮಿಸಲಾಗುತ್ತಿರುವ ಮನೆಗಳಿಗೆ ಪೂರ್ಣಗೊಳಿಸಲು ಕ್ರಮವಹಿಸಲು ತಿಳಿಸಿದರು.

ಸ್ವಚ್ಛ ಭಾರತ ಮಿಷನ್, ಎನ್.ಆರ್.ಎಲ್.ಎಂ ಯೋಜನೆಯ ಪ್ರಗತಿ ಮಾಹಿತಿಯನ್ನು ಪಡೆದು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಜಲ ಜೀವನ್ ಮಿಷನ್ ಕಾಮಗಾರಿಗಳ ಮಾಹಿತಿಗಳನ್ನು ಪಡೆದುಕೊಂಡರು. ಅಂಗನವಾಡಿಗಳಿಗೆ ಸಂಬಂಧಿಸಿದಂತೆ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿಗಳಿಗೆ ಜಾಗಗಳನ್ನು ಗುರುತಿಸುವ ಕಾರ್ಯ ನಡೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿದೇರ್ಶಕಿ ಅಕ್ಕಮಹಾದೇವಿ ತಿಳಿಸಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ಪ್ರಗತಿ ಪರಿಶೀಲಿಸಿ, ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ, ಸಮವಸ್ತ್ರಗಳ ಹೆಚ್ಚು ಗಮನ ಹರಿಸಬೇಕು. ಹುನಗುಂದ ತಾಲೂಕಿನ ನಂದವಾಡಗಿಯಲ್ಲಿ ಆಹಾರ ಪದಾರ್ಥಗಳಲ್ಲಿ ಹುಳು ಇರುವ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು, ಈ ಬಗ್ಗೆ ಸೂಕ್ತ ಕ್ರಮಗಳು ಆಗಬೇಕು. ಗೌರವಧನ ಆಧಾರ ಮೇಲೆ ಶಿಕ್ಷಕರು ನೇಮಕ ಆಗಬೇಕು ಎಂದರು. ವಿವಿಧ ನಿಗಮಗಳಲ್ಲಿ ಬೋರವೆಲ್‍ಗಳಿಗೆ ವಿದ್ಯುದ್ದೀಕರಣ ಬಾಕಿ ಇದ್ದು, ಹೆಸ್ಕಾದವರು ಕ್ರಮವಹಿಸಲು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿ.ಪಂ ಸಿಇಓ ಶಶಿಧರ ಕುರೇರ, ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಜಿ.ಪಂ ಮುಖ್ಯ ಯೋಜನಾಧಿಕಾರಿ ನಿರ್ಮಲ, ಉಪವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ, ಸಂತೋಷ ಕಾಮಗೌಡ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮ ಉಕ್ಕಲಿ, ಯೋಜನಾ ನಿರ್ದೇಶಕ ಕಾಂಬಳೆ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಸೇರಿದಂತೆ ಜಿಲ್ಲಾ ಮಟ್ಟದ, ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net