

ಕಡೂರು: ದೇಹ ಸದೃಢ ಹಾಗೂ ಮನೋಸ್ಥೈರ್ಯ ಹೆಚ್ಚಳಕ್ಕೆ ಕ್ರೀಡೆಗಳು ಸಹಕಾರಿ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಚಕ್ರವರ್ತಿ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯೂ ಜೀವನದ ಒಂದು ಭಾಗ. ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುತ್ತದೆ. ನೀತಿ ನಿಯಮಗಳ ಸಂವಹನೆಯೊಂದಿಗೆ ಶಿಸ್ತಿನ ಅರಿವು ಉಂಟಾಗುತ್ತದೆ. ಕ್ರೀಡಾಕೂಟವು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೆಚ್ಚಿಸುತ್ತದೆ ಎಂದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ.ಸಿ.ಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗದ ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟಗಳು ಸಹಕಾರಿ. ಆರೋಗ್ಯ ದೃಷ್ಟಿಯಿಂದಲೂ ಕ್ರೀಡೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ ಎಂದು ಹೇಳಿದರು.
ತಾಲೂಕಿನ 24 ಪದವಿಪೂರ್ವ ಕಾಲೇಜುಗಳ ಕ್ರೀಡಾಪಟು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಪುರಸಭೆ ಸದಸ್ಯ ತೋಟದಮನೆ ಮೋಹನ್‌ಕುಮಾರ್, ಬಿಇಒ ಆರ್.ಸಿದ್ದರಾಜುನಾಯ್ಕ, ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ.ರಾಘವೇಂದ್ರ, ಪ್ರಾಚಾರ್ಯರಾದ ರುದ್ರೇಶ್, ತವರಾಜ್, ಕೆಂಪಸಿದ್ದಪ್ಪ, ಜಿ.ರೇವಣ್ಣ, ರಾಜಪ್ಪ, ಶರತ್, ಚನ್ನಬಸಪ್ಪ, ರವಿಕಾಂತ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಆನಂದಪ್ಪ, ದರ್ಶನ್, ಬಿ.ಎಂ.ಗಿರೀಶ್, ಧನಂಜಯ್ ಇದ್ದರು.