

ಶಿರಸಿ/ಸಿದ್ದಾಪುರ: ಕರೊನಾ ಸೇನಾನಿಗಳಿಂದ ಸಮಾಜದಲ್ಲಿ ನಿರಂತರ ಆರೋಗ್ಯ ಸರ್ವೆ ಜಾರಿಯಲ್ಲಿರಬೇಕು ಎಂದು ಜಿಲ್ಲಾಧಿಕಾರಿ ಕೆ.ಹರೀಶಕುಮಾರ ಹೇಳಿದರು.
ಶಿರಸಿ ಮತ್ತು ಸಿದ್ದಾಪುರದ ಶಂಕರಮಠದ ಸಭಾಂಗಣದಲ್ಲಿ ಶನಿವಾರ ಜರುಗಿದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಪಿಡಿಒ, ಗ್ರಾಮಲೆಕ್ಕಾಧಿಕಾರಿ, ಆರೋಗ್ಯ ಮತ್ತು ಇತರ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶನಿವಾರ ನಗರದಲ್ಲಿ ಕರೊನಾ ಸೇನಾನಿಗಳಿಗೆ ಅಭಿನಂದಿಸಿ ಮಾತನಾಡಿದ ಅವರು, ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡ ಪರಿಣಾಮ ಉತ್ತರ ಕನ್ನಡ ಜಿಲ್ಲೆ ಕರೊನಾ ಮಹಾಮಾರಿಯಿಂದ ರಕ್ಷಣೆಯಾಗಿದೆ. ಜತೆ, ಸರ್ಕಾರ ಸೂಚಿಸುವ ಮುನ್ನವೇ ಮನೆ ಮನೆ ಸರ್ವೆ ಕಾರ್ಯ ಮಾಡಿದ್ದು, ಜೀವನಾವಶ್ಯಕ ವಸ್ತು ತಲುಪುವಂತೆ ಮಾಡಿದ್ದು ಇಂದಿನ ಯಶಸ್ಸಿಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ದಾಖಲಾದ ಪ್ರತಿ ಪ್ರಕರಣವನ್ನೂ ಯಶಸ್ವಿಯಾಗಿ ನಿಭಾಯಿಸಲಾಗಿದೆ. ಹೀಗಾಗಿ ಸಮುದಾಯಕ್ಕೆ ಹರಡುವ ಭೀತಿಯಿಲ್ಲ ಎಂದು ತಿಳಿಸಿದರು.
ತಪ್ಪು ತಿಳಿವಳಿಕೆ ಹೋಗಲಾಡಿಸಿ: ರೊನಾ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಯನ್ನು ಮೊದಲು ಹೋಗಲಾಡಿಸಬೇಕು. ಮೊದಲನೆಯದಾಗಿ ಹೊರಗಿನಿಂದ ಯಾರು ಬಂದಿದ್ದಾರೆ ಎನ್ನುವ ಕುರಿತು ಮಾಹಿತಿ ಕಲೆ ಹಾಕಿಬೇಕು. ಅವರನ್ನು ಸಂರ್ಪಸಿ ಆರೋಗ್ಯದ ಕುರಿತು ವಿಚಾರಿಸಬೇಕು. ಜನರು ಸಹ ಪ್ರಾಮಾಣಿಕವಾಗಿ ಮಾಹಿತಿ ನೀಡಿದರೆ ಮಾತ್ರ ಕರೊನಾ ನಿಯಂತ್ರಿಸಬಹುದು ಎಂದು ಹೇಳಿದರು.
ಶಿರಸಿಯಲ್ಲಿ ತಹಸೀಲ್ದಾರ್ ಎಂ.ಆರ್.ಕುಲಕರ್ಣಿ, ಪೌರಾಯುಕ್ತ ರಮೇಶ ನಾಯಕ, ತಾಲೂಕು ಆರೋಗ್ಯಾಧಿಕಾರಿ ವಿನಾಯಕ ಭಟ್ಟ, ಸಿಡಿಪಿಒ ದತ್ತಾತ್ರೇಯ ಭಟ್ಟ ಇದ್ದರು. ಸಿದ್ದಾಪುರದಲ್ಲಿ ತಹಸೀಲ್ದಾರ್ ಮಂಜುಳಾ ಎಸ್.ಭಜಂತ್ರಿ, ತಾಪಂ ಇಒ ಪ್ರಶಾಂತರಾವ್, ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ, ಸಿಪಿಐ ಪ್ರಕಾಶ ಉಪಸ್ಥಿತರಿದ್ದರು.