ಆರೋಗ್ಯ ಕೇಂದ್ರಕ್ಕೆ ಬೇಕು ಚಿಕಿತ್ಸೆ

13-hvr-01
Published on

ನೀರಲಗಿ (ಗುತ್ತಲ): ಗ್ರಾಮೀಣ ಮಹಿಳೆಯರ ಆರೋಗ್ಯ ಕಾಪಾಡುವ ಉದ್ದೇಶದಿಂದ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಆದರೆ, ಯೋಜನೆಯ ಫಲ ಶ್ರೀಸಾಮಾನ್ಯನಿಗೆ ಸರಿಯಾಗಿ ತಲುಪುತ್ತಿಲ್ಲ ಎಂಬುದಕ್ಕೆ ನೀರಲಗಿ ಗ್ರಾಮದಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರ ಉದಾಹರಣೆಯಂತಿದೆ.

ಐದು ವರ್ಷಗಳ ಹಿಂದೆ ಉದ್ಘಾಟನೆ ಗೊಂಡ ಈ ಉಪಕೇಂದ್ರದಲ್ಲಿ ಈವರೆಗೂ ಒಬ್ಬ ವೈದ್ಯ ಸಹಾಯಕಿಯರಿಲ್ಲದೆ ಬಾಗಿಲು ಮುಚ್ಚಿಕೊಂಡಿದೆ. ಇದರಿಂದ ಕಟ್ಟಡವೂ ಪಾಳು ಬೀಳುತ್ತಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ.

ಬೆಳವಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಲಗಿ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆಯಡಿ 22 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ವಣಗೊಂಡಿರುವ ಈ ಆರೋಗ್ಯ ಕೇಂದ್ರವನ್ನು 2015ರಲ್ಲಿ ಉದ್ಘಾಟಿಸಲಾಯಿತು. ಆರಂಭದಲ್ಲಿ ಮೂರು ತಿಂಗಳ ಕಾಲ ಒಬ್ಬ ಆರೋಗ್ಯ ಸಹಾಯಕಿ ಕಾರ್ಯ ನಿರ್ವಹಿಸುತ್ತಿದ್ದರು. ಅವರನ್ನು ಬೇರೆಡೆಗೆ ವರ್ಗಾವಣೆ ಗೊಳಿಸಲಾಯಿತು. ಬಳಿಕ ಯಾವುದೇ ಆರೋಗ್ಯ ಸಹಾಯಕಿಯರನ್ನು ನೇಮಕಗೊಳಿಸಿಲ್ಲ. ಅಂದಿನಿಂದ ಇಂದಿನವರೆಗೂ ಬಾಗಿಲು ತೆರೆದಿಲ್ಲ. ಇದಕ್ಕೆ ಆರೋಗ್ಯ ಇಲಾಖೆಯು ಗ್ರಾಮಕ್ಕೆ ಸಿಬ್ಬಂದಿ ನೇಮಿಸದಿರುವುದು ಮತ್ತು ಹಂದಿಗನೂರಲ್ಲಿರುವ ಆರೋಗ್ಯ ಕೇಂದ್ರದ ಸಿಬ್ಬಂದಿಯೇ ಇಲ್ಲಿಯೂ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿರುವುದೇ ಈ ಆರೋಗ್ಯ ಕೇಂದ್ರ ಬಾಗಿಲು ಮುಚ್ಚಲು ಕಾರಣವಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಗ್ರಾಮದಲ್ಲಿ ಆರೋಗ್ಯ ಕೇಂದ್ರ ಇದ್ದರೂ ಇಲ್ಲದಂತಾಗಿದೆ. ಗರ್ಭಿಣಿಯರು ಪ್ರತಿ ತಿಂಗಳು ಆರೋಗ್ಯ ತಪಾಸಣೆ ಹಾಗೂ ಹೆರಿಗೆಗಾಗಿ 3 ಕಿಮೀ ದೂರದ ಮೇವುಂಡಿ ಇಲ್ಲವೆ, 13 ಕಿಲೋ ಮೀಟರ್ ದೂರದ ಗುತ್ತಲಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಿಸಬೇಕಾಗಿದೆ. ಸೂಕ್ತ ಚಿಕಿತ್ಸೆ ದೊರೆಯದೇ ರೋಗಿಗಳು ಸಾವನ್ನಪ್ಪುತ್ತಿರುವ ಪ್ರಕರಣಗಳೇ ಹೆಚ್ಚಿವೆ.

ಸ್ಥಗಿತಗೊಂಡಿರುವ ಆರೋಗ್ಯ ಕೇಂದ್ರವು ಮದ್ಯಪ್ರಿಯರ ತಾಣ ವಾಗುತ್ತಿದ್ದು, ಅನೈತಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ. ಹೀಗಾಗಿ ಕೆಲವರು ಆರೋಗ್ಯ ಕೇಂದ್ರದ ಕಿಟಕಿಯ ಗಾಜುಗಳನ್ನು ಹಾಗೂ ಕೀಲಿ ಒಡೆದಿದ್ದಾರೆ. ಆರೋಗ್ಯ ಸುಧಾರಣೆಗೆ ಉಪಯೋಗವಾಗಬೇಕಿದ್ದ ಆರೋಗ್ಯ ಕೇಂದ್ರ ಬೇರ್ಯಾವುದೋ ಚಟುವಟಿಕೆಗಳಿಗೆ ಉಪಯೋಗವಾಗುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಆರೋಗ್ಯ ಉಪಕೇಂದ್ರಕ್ಕೆ ಸಿಬ್ಬಂದಿ ನೇಮಕವಾಗದೇ 5 ವರ್ಷಗಳೇ ಕಳೆದಿವೆ. ಬಾಗಿಲು ಮುಚ್ಚಿಕೊಂಡಿರುವ ಕಟ್ಟಡ ಬಿರುಕು ಬಿಡುತ್ತಿದೆ. ಗ್ರಾಮದಲ್ಲಿ ವಯೋವೃದ್ಧರು, ಗರ್ಭಿಣಿಯರು ಚಿಕಿತ್ಸೆಗಾಗಿ ಮೇವುಂಡಿ, ಗುತ್ತಲ ಗ್ರಾಮಗಳಿಗೆ ಹೋಗುವ ಪರಿಸ್ಥಿತಿಯಿದೆ. ಕೂಡಲೆ, ಆರೋಗ್ಯ ಇಲಾಖೆ ಸಿಬ್ಬಂದಿ ನೇಮಿಸಬೇಕು ಇಲ್ಲದಿದ್ದರೆ, ಗ್ರಾಮಸ್ಥರೆಲ್ಲರೂ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. | ಡಿ.ಎಂ. ಅಣ್ಣಿಗೇರಿ ಗ್ರಾಮಸ್ಥ

ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆ ಖಾಲಿಯಿತ್ತು. ಆರು ತಿಂಗಳ ಹಿಂದೆ ಒಬ್ಬರನ್ನು ನೇಮಿಸಲಾಗಿದೆ. ಆರೋಗ್ಯ ಕೇಂದ್ರ ಕಟ್ಟಡವು ಗ್ರಾಮದಿಂದ ಸ್ವಲ್ಪ ದೂರದಲ್ಲಿರುವುದರಿಂದ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಬಂದು ಹೋಗಲು ತೊಂದರೆಯಾಗುವುದರಿಂದ ಗ್ರಾಮದ ಅಂಗನವಾಡಿಯಲ್ಲಿಯೇ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಸಹಾಯಕಿಯರು ಒಬ್ಬರೇ ಇರುವುದರಿಂದ ಅಲ್ಲಿ ವಾಸಿಸಲು ಅವರು ಮುಂದಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕಟ್ಟಡದಲ್ಲಿಯೇ ವಾಸಿಸಲು ಸೂಚನೆ ನೀಡುತ್ತೇನೆ. | ಡಾ. ಪ್ರಭಾಕರ ಕುಂದೂರ ಟಿಎಚ್​ಒ ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net