

ಹಾವೇರಿ: ಇವರೆಲ್ಲರೂ ಮುಂದೆ ಆರೋಗ್ಯ ಇಲಾಖೆ ಸೇರಿ ಕರೊನಾ ಜಾಗೃತಿ ಜೊತೆಗೆ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದವರು. ಆದರೆ, ಇವರೇ ಕೋವಿಡ್ ನಿಯಂತ್ರಣದ ಮಾರ್ಗಸೂಚಿಗಳ ಅರಿವೇ ಇಲ್ಲದಂತೆ ವರ್ತಿಸಿದರು. ಇನ್ನು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಬೇರೆಯವರಿಗೆ ಮಾರ್ಗದರ್ಶನ ನೀಡುವ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿದ್ದರೂ ಕಣ್ಮುಚ್ಚಿ ಕುಳಿತಿದ್ದರು.
ಇದು, ನಗರದ ತಾಲೂಕು ಆರೋಗ್ಯ ಭವನದಲ್ಲಿ ಸೋಮವಾರ ಕಂಡುಬಂದ ದೃಶ್ಯ.
ಜಿಲ್ಲಾ ಆರೋಗ್ಯ ಇಲಾಖೆಯಿಂದ ಆರೋಗ್ಯ ಸೇವೆಗಾಗಿ ಗುತ್ತಿಗೆ ಆಧಾರದಲ್ಲಿ 16 ಲ್ಯಾಬ್ ಟೆಕ್ನಿಷಿಯನ್ಸ್, 17 ಫಾರ್ವಸಿಸ್ಟ್ ಹಾಗೂ 20 ಸ್ಟಾಫ್ ನರ್ಸ್ಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ಆಯ್ಕೆ ಬಯಸಿ 67 ಲ್ಯಾಬ್ ಟೆಕ್ನಿಷಿಯನ್ಸ್, 70 ಫಾರ್ವಸಿಸ್ಟ್ ಹಾಗೂ 100 ಸ್ಟಾಫ್ ನರ್ಸ್ ಹುದ್ದೆಗೆ ಆಕಾಂಕ್ಷಿಗಳು ಬಂದಿದ್ದರು.
ಆದರೆ, ಇವರೆಲ್ಲ ಪರಸ್ಪರ ಅಂತರ ಕಾಪಾಡಿಕೊಂಡು ಸರದಿಯಲ್ಲಿ ಸಂದರ್ಶನಕ್ಕೆ ಹಾಜರಾಗದೇ ಜನಜಾತ್ರೆಯಂತೆ ಸೇರಿದ್ದರು. ಇವರನ್ನು ಸಂದರ್ಶನಕ್ಕೆ ಆಹ್ವಾನಿಸಿದ್ದ ಆರೋಗ್ಯ ಇಲಾಖೆಯೂ ಇವರನ್ನು ನಿಯಂತ್ರಿಸಲಿಲ್ಲ. ಇದನ್ನು ನೋಡಿದ ಸಾರ್ವಜನಿಕರು ಆರೋಗ್ಯ ಇಲಾಖೆಯವರೇ ಈ ರೀತಿ ಮಾರ್ಗಸೂಚಿ ಉಲ್ಲಂಘಿಸಿದರೆ ಇನ್ನು ಸಾಮಾನ್ಯ ಜನರಿಗೆ ಯಾವ ರೀತಿಯಲ್ಲಿ ಜಾಗೃತಿ ಹಾಗೂ ಮಾರ್ಗದರ್ಶನ ನೀಡುತ್ತಾರೆ. ಇಂತಹ ಅಭ್ಯರ್ಥಿಗಳನ್ನು ಆರೋಗ್ಯ ಇಲಾಖೆಗೆ ಆಯ್ಕೆ ಮಾಡಿ ಏನು ಪ್ರಯೋಜನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಸ್ಪರ ಅಂತರ ಕಾಯ್ದುಕೊಂಡು ಸರದಿಯಲ್ಲಿ ಬರುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದೆವು. ಆದರೂ ಕೇಳಲಿಲ್ಲ. ಕೊನೆಗೆ ಪೊಲೀಸ್ ಸಿಬ್ಬಂದಿ ಕರೆಯಿಸಿ ಪರಸ್ಪರ ಅಂತರ ಕಾಪಾಡಿದ್ದೇವೆ. ಅಭ್ಯರ್ಥಿಗಳಷ್ಟೆ ಅಲ್ಲದೆ, ಅವರೊಂದಿಗೆ ಒಬ್ಬೊಬ್ಬರು ಬಂದಿದ್ದರಿಂದ ಹೆಚ್ಚಿನ ಜನ ಸೇರುವಂತಾಗಿತ್ತು. | ಡಾ. ರಾಜೇಂದ್ರ ದೊಡ್ಡಮನಿ, ಡಿಎಚ್ಒ ಹಾವೇರಿ