

ಸಿದ್ದಾಪುರ: ಸಿದ್ದಾಪುರ ಸುತ್ತಮುತ್ತಲ ಭಾಗದ ಜನರ ಆರೋಗ್ಯ ಸೇವೆಯ ಅನುಕೂಲಕ್ಕಾಗಿ ಕರಡಿಗೂಡುವಿನ ಆರೆಂಜ್ ಕೌಂಟಿ ಇವಾಲ್ ಬ್ಯಾಕ್ ರೆಸಾರ್ಟ್ ಸಂಸ್ಥೆ ಸುಸಜ್ಜಿತ ಸೌಲಭ್ಯಗಳುಳ್ಳ ಆಂಬುಲೆನ್ಸ್ ವಾಹನವನ್ನು ಎಸ್‌ಎಂಡಿಪಿ ಯೂನಿಯನ್ ಸಂಘಟನೆಗೆ ಹಸ್ತಾಂತರಿಸಿದರು.
ಆರೆಂಜ್ ಕೌಂಟಿ ರೆಸಾರ್ಟ್‌ನಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥ ಇಮಾನುವಿಲ್ ಟಿ.ರಾಮಪುರಂ ಮಾತನಾಡಿ, ಸಿದ್ದಾಪುರ ಸುತ್ತಮುತ್ತಲ ಗ್ರಾಮೀಣ ಭಾಗದ ಜನರು ತುರ್ತು ಸೇವೆಗೆ ಆಂಬುಲೆನ್ಸ್ ಕೊರತೆ ಇದ್ದ ಹಿನ್ನೆಲೆ ಎಸ್‌ಎನ್‌ಡಿಪಿ ಯೂನಿಯನ್ ಮನವಿ ಮೇರೆಗೆ ಸಂಸ್ಥೆ ವತಿಯಿಂದ ವಾಹನವನ್ನು ಕೊಡುಗೆ ನೀಡಲಾಗಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಎಸ್‌ಎನ್‌ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ.ಲೋಕೇಶ್ ಮಾತನಾಡಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆರೆಂಜ್ ಕೌಂಟಿ ಸಂಸ್ಥೆ ಅಂದಾಜು 25 ಲಕ್ಷ ರೂ. ವೆಚ್ಚದ ಆಂಬುಲೆನ್ಸ್ ನೀಡಿದೆ. ಸಂಘಟನೆ ಮನವಿ ಸಂಸ್ಥೆಯ ಮುಖ್ಯಸ್ಥರು ಸ್ಪಂದಿಸಿದ್ದಾರೆ. ಸಂಸ್ಥೆಯು ಆರೋಗ್ಯ, ಪರಿಸರ, ಶುಚಿತ್ವ, ಸೋಲಾರ್ ಬೀದಿ ದೀಪ ಅಳವಡಿಕೆ, ಬಸ್ ತಂಗುದಾಣ ನಿರ್ಮಾಣ, ಶಾಲೆ ದತ್ತು ಸ್ವೀಕಾರ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‌ಎನ್‌ಡಿಪಿ ಯೂನಿಯನ್ ಉಪಾಧ್ಯಕ್ಷ ರಾಜನ್, ಕಾರ್ಯದರ್ಶಿ ಪ್ರೇಮಾನಂದ, ಪ್ರಮುಖರಾದ ಗಿರೀಶ್, ಆನಂದ್, ಆರೆಂಜ್ ಕೌಂಟಿ ರೆಸಾರ್ಟ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಥಾಮಸ್ ಪೌಲ್, ವ್ಯವಸ್ಥಾಪಕ ವಸಂತ್ ಇದ್ದರು.