

ಬಾಗಲಕೋಟೆ: ಗುರುಸಾರ್ವಭೌಮ ರಾಘವೇಂದ್ರ ಸ್ವಾಮಿಗಳ ೩೫೩ನೇ ಆರಾಧನಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಜಿಲ್ಲೆಯ ವಿವಿಧೆಡೆ ರಾಯರ ಮಠದಲ್ಲಿ ಮೂರು ದಿನಗಳಕಾಲ ಧಾರ್ಮಿಕ, ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳು ನಡೆದವು. ಗುರುವಾರ ಆರಾಧನಾ ಮಹೋತ್ಸವ ಸಂಪನ್ನಗೊಂಡಿತು.
ಪ್ರತಿದಿನ ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಅರ್ಚನೆ, ಪಾದಪೂಜೆ, ಕನಕಾಭಿಷೇಕ, ನೈವೇದ್ಯ, ಅಲಂಕಾರ ಪೂಜೆ, ಹಸ್ತೋದಕ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ಜರುಗಿತು. ಸಂಜೆ ಭಜನೆ, ಸಂಗೀತ, ಸ್ವಸ್ತಿ ವಾಚನ, ಮಹಾಮಂಗಳಾರತಿ ನಡೆದವು. ಆರಾಧನೆ ಅಂಗವಾಗಿ ಗುರು ರಾಯರ ವೃಂದಾವನವನ್ನು ನಾನಾ ಹೂಗಳಿಂದ ಅಲಂಕರಿಸಲಾಗಿತ್ತು.
ನಗರದ ವಿದ್ಯಾಗಿರಿ ಬಡಾವಣೆಯ ವಿಪ್ರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ರಾಯರ ಮಠದಲ್ಲಿ, ಕಿಲ್ಲಾಗಲ್ಲಿಯಲ್ಲಿರುವ ನಂಜನಗೂಡು ಶಾಖಾ ಮಠ ಹಾಗೂ ನಾಗಸಂಪಗಿ ಅವರ ಮಠದಲ್ಲಿ ರಾಘವೇಂದ್ರ ಸ್ವಾಮಿಗಳವರ ಆರಾಧನೆ ಜರುಗಿತು. ಸಹಸ್ರಾರು ಭಕ್ತರು ಮಠಗಳಿಗೆ ತೆರಳಿ ಗುರು ರಾಯರ ವೃಂದಾವನಕ್ಕೆ ನಮಿಸಿದರು. ಇಷ್ಟಾರ್ಥ ಸಿದ್ದಿಗಾಗಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ವಿವಿಧ ಧಾರ್ಮಿಕ ಕಾರ್ಯಕ್ರಮ, ಪ್ರವಚನಗಳೊಂದಿಗೆ ವೈಭವದಿಂದ ರಾಯರ ಮೂರುದಿಗಳ ಆರಾಧನೆ ಗುರುವಾರ ಸಂಪನ್ನಗೊಂಡಿತು. ಮನೆ, ಮನದಲ್ಲಿ ರಾಯರನ್ನು ಸ್ಮರಿಸಲಾಯಿತು. ವಿವಿಧೆಡೆ ನಾಡಿನ ಖ್ಯಾತ ಸಂಗೀತಗಾರರಿಂದ ದಾಸವಾಣಿ ಕಾರ್ಯಕ್ರಮಗಳು ನಡೆದವು.
ಬಾಗಲಕೋಟೆ ನಗರದ ಅಷ್ಟೆ ಅಲ್ಲದೆ ಕೂಡಲಸಂಗಮ, ಬೀಳಗಿ, ಗಲಗಲಿ,ಮಹಾಲಿಂಗಪೂರ, ರಬಕವಿ, ಬನಹಟ್ಟಿ, ಮುಧೋಳ, ಜಮಖಂಡಿ, ಹುನ್ನೂರ, ಹುನಗುಂದ, ಕಮತಗಿ, ಇಳಕಲ್ಲ ಸೇರಿದಂತೆ ವಿವಿಧೆಡೆ ರಾಘವೇಂದ್ರ ಸ್ವಾಮಿಗಳ ೩೫೩ ನೇ ಆರಾಧನಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಉತ್ತರಾಧನೆ ಅಂಗವಾಗಿ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಕ್ತರ ಹರ್ಷೋದ್ಘಾರ ನಡುವೆ ರಥೋತ್ಸವ ಜರುಗಿತು.