

ಕುಶಾಲನಗರ: ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಡೆಯುವ ವಾರದ ಸಂತೆಯನ್ನು ಸ್ಥಳಾಂತರ ಮಾಡದಂತೆ ಆಗ್ರಹಿಸಿ ಸಂತೆ ವ್ಯಾಪಾರಿಗಳು ಬುಧವಾರ ಆರ್‌ಎಂಸಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ ಎರಡು ವರ್ಷಗಳಿಂದ ವಾರದ ಸಂತೆ ಕುಶಾಲನಗರ ಪಟ್ಟಣದ ಮೈಸೂರು ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಸುಸೂತ್ರವಾಗಿ ನಡೆಯುತ್ತಿದ್ದು, ಅದನ್ನು ಮತ್ತೆ ಕೆಇಬಿ ಕಚೇರಿ ಮುಂಭಾಗ ಇರುವ ಹಳೇ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಲು ಕೆಲವರು ಹುನ್ನಾರ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಆರ್‌ಎಂಸಿ ಆವರಣದಲ್ಲಿ ಎಲ್ಲ ರೀತಿಯ ಮೂಲಸೌಕರ್ಯ ಹೊಂದಿದ್ದು ವಿದ್ಯುತ್ ವ್ಯವಸ್ಥೆ, ಶೌಚಗೃಹ ಮತ್ತು ಆವರಣ ಗೋಡೆ ಜತೆಗೆ ಮೂಲಸೌಲಭ್ಯ ಹೊಂದಿರುವ ಸುಮಾರು 11 ಎಕರೆ ಪ್ರದೇಶದಲ್ಲಿ ವಾರದ ಸಂತೆ ನಡೆಯುತ್ತಿದೆ. ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ರೈತರು ತರಕಾರಿ ಮತ್ತು ಇತರ ವಸ್ತುಗಳನ್ನು ತಂದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇದರಿಂದ ರೈತರಿಗೂ, ವ್ಯಾಪಾರಸ್ಥರಿಗೂ, ಗ್ರಾಹಕರಿಗೂ ತುಂಬಾ ಅನುಕೂಲ ಉಂಟಾಗಿದೆ ಎಂದು ಆರ್‌ಎಂಸಿ ಸಂತೆ ವ್ಯಾಪಾರಿಗಳು ಮತ್ತು ವರ್ತಕರ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಎಸ್.ಮಹೇಶ್ ತಿಳಿಸಿದ್ದಾರೆ.
ಕೆಲವು ಮಧ್ಯವರ್ತಿಗಳು ಇದನ್ನು ಸಹಿಸದೆ ಮತ್ತೆ ಹಳೇ ಮಾರುಕಟ್ಟೆಗೆ ವಾರದ ಸಂತೆ ಸ್ಥಳಾಂತರಿಸುವ ಹುನ್ನಾರ ನಡೆಸುತ್ತಿದ್ದು, ಹಳೇ ಮಾರುಕಟ್ಟೆ ಆವರಣದಲ್ಲಿ ಅಪಾಯಕಾರಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಜತೆಗೆ ಯಾವುದೇ ಮೂಲ ವ್ಯವಸ್ಥೆ ಸೌಲಭ್ಯ ಇಲ್ಲ. ಈ ಹಿಂದೆ ಮಳೆಗಾಲ ಅವಧಿಯಲ್ಲಿ ವಿದ್ಯುತ್ ಗೋಪುರಗಳ ಮೂಲಕ ವಿದ್ಯುತ್ ತಗಲಿ ಜಾನುವಾರುಗಳು ಪ್ರಾಣ ಕಳೆದುಕೊಂಡಿರುವ ಪ್ರಕರಣಗಳು ನಡೆದಿವೆ ಎಂದರು.
ಅಪಾಯಕಾರಿ ಸ್ಥಳದಲ್ಲಿ ಸಂತೆ ಮಾರುಕಟ್ಟೆ ನಡೆಸಲು ಅವಕಾಶ ಕಲ್ಪಿಸಬಾರದು ಎಂದು ಸಂಬಂಧಿಸಿದ ಅಧಿಕಾರಿಗಳನ್ನು ಆಗ್ರಹಿಸಿರುವ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಗೋವಿಂದಶೆಟ್ಟಿ, ಯಾವುದೇ ಸಂದರ್ಭ ಆರ್‌ಎಂಸಿ ಮಾರುಕಟ್ಟೆ ಆವರಣದಿಂದ ವಾರದ ಸಂತೆ ಸ್ಥಳಾಂತರಗೊಳಿಸಬಾರದು ಎಂದು ಒತ್ತಾಯಿಸಿದರು.
ಕುಶಾಲನಗರಕ್ಕೆ ಭೇಟಿ ನೀಡಿದ್ದ ಮಡಿಕೇರಿ ಉಪ ವಿಭಾಗಾಧಿಕಾರಿ ಹಾಗೂ ಕುಶಾಲನಗರ ಪುರಸಭೆ ಆಡಳಿತ ಅಧಿಕಾರಿ ಆಗಿರುವ ವಿನಾಯಕ ನಾರ್ವಡೆ ಅವರಿಗೆ ವ್ಯಾಪಾರಿಗಳು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅವರು, ಈ ಬಗ್ಗೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಅನಿಲ್, ದೇವರಾಜ್, ಸಹಕಾರ ಸಂಘದ ನಿರ್ದೇಶಕರು ಹಾಗೂ ಆರ್‌ಎಂಸಿ ಮಾಜಿ ಅಧ್ಯಕ್ಷ ಎಂ.ಡಿ.ರಮೇಶ್, ಮಾಜಿ ನಿರ್ದೇಶಕ ಕೆ.ಸಿ.ಶಶಿ ಭೀಮಯ್ಯ ಮತ್ತಿತರರು ಇದ್ದರು.