ಆಯುರ್ವೇದ ಇಂದು ಹೆಚ್ಚು ಪ್ರಚಲಿತ

bkt-10-2
ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆಯುಷ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಆಯುರ್ವೇಧ ದಿನಾಚರಣೆ ಕಾರ್ಯಕ್ರಮ ಸಂಸದ ಪಿ.ಸಿ.ಗದ್ದಿಗೌಡರ ಉದ್ಘಾಟಿಸಿದರು
Published on

ಬಾಗಲಕೋಟೆ: ಅಲೋಪತಿಕ್ ಔಷಧಕ್ಕೆ ಮೊರೆ ಹೋದ ಅನೇಕ ರೋಗಿಗಳು ಪರ್ಯಾಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ತಮಗೊದಗಿ ಬಂದ ರೋಗದಿಂದ ಸಂಪೂರ್ಣ ಗುಣಮುಖರಾಗಲು ಇಂದು ಆಯುರ್ವೇದ ಪದ್ಧತಿಗೆ ಮೊರೆ ಹೋಗುತ್ತಿದ್ದಾರೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆಯುಷ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಋಷಿಮುನಿಗಳು ಯೋಗ, ಆಸನ, ಮುದ್ರಾ, ಯುನಾನಿಗಳಂತಹ ಹಾಗೂ ಔಷಧಿಯ ಸಸ್ಯಗಳ ವನಸ್ಪತಿ ಉಪಯೋಗಿಸಿಕೊಂಡು ಆಯುರ್ವೇದ ಪದ್ಧತಿ ಅನುಸರಿಸುತ್ತಾ ನೂರಾರು ವರ್ಷ ಬದುಕುತ್ತಿದ್ದರು ಎಂದರು.

ಇಂದು ಒತ್ತಡದ ಬದುಕಿಗೆ ಹಾಗೂ ಕಲುಷಿತ ಆಹಾರ ಪದ್ದತಿಯಿಂದ ನೂರಾರು ರೋಗಗಳು ಹುಟ್ಟಿಕೊಳ್ಳುವದಲ್ಲದೇ ಅಲೋಪತಿಯಂತಹ ತ್ವರಿತ ಚಿಕಿತ್ಸೆ ಪಡೆದು ಬಾಹ್ಯರೋಗಕ್ಕೆ ತುತ್ತಾಗುತ್ತಿದ್ದಾರೆ. ಆಹಾರವೇ ಔಷಧಿಯಾಗಿದ್ದು, ಜನರು ಇನ್ನಾದರೂ ಆಹಾರ, ವಿಹಾರ, ಜೀವನಶೈಲಿಯಂತಹ ಆಯುರ್ವೇದ ಪದ್ದತಿ ಬಳಸಿಕೊಂಡು ನಿರೋಗಿಗಳಾಗಿ ಬದುಕಲು ಕರೆ ನೀಡಿದರು.

ವಾಸನ ಗ್ರಾಮದ ನಾಟಿ ವೈದ್ಯ ಹನಮಂತ ಮಳಲಿ ಮಾತನಾಡಿ, ಮನೆಯ ಮೊದಲು ಪಾಠಶಾಲೆ ಎಂಬಂತೆ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ದೊರೆಯಬಹುದಾದ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು. ಇಂದು ಸಾಮಾನ್ಯ ಕಾಯಿಲೆಗೆ ಆಸ್ಪತ್ರೆಗೆ ಅಲೆದಾಡಿ ಹಣ ಮತ್ತು ಸಮಯ ಹಾಳು ಮಾಡಿಕೊಳ್ಳದೇ ಮನೆಯಲ್ಲಿ ಸಿಗುವ ವಸ್ತುಗಳಾದ ಕರೆ ಮೆಣಸು, ತುಳಸಿ ಎಲೆ, ಶುಂಠಿ, ಕಲ್ಲುಪ್ಪು, ಬೆಲ್ಲ, ರಾಗಿ, ಜೋಳ ಮುಂತಾದ ವಸ್ತುಗಳನ್ನು ಬಳಸಿಕೊಂಡು ನಿವಾರಿಸಿಕೊಳ್ಳಬಹುದಾಗಿದೆ. ಆದಷ್ಟು ಜನತೆ ಆಧುನಿಕತೆಗೆ ಮರುಳಾಗದೇ ಪ್ರಾಕೃತಿಕವಾಗಿ ಸಿಗುವ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ ಆರೋಗ್ಯವಂತ ಜೀವನ ನಡೆಸಬೇಕು ಎಂದು ಹೇಳಿದರು.

ಶಾಸಕ ಎಚ್.ವೈ.ಮೇಟಿ ಮಾತನಾಡಿ, ಹಿಂದಿನ ಕಾಲದಲ್ಲಿ ಆಸ್ಪತ್ರೆ, ಔಷಧಿಗಳು ಇರಲಿಲ್ಲ. ಅಂದು ನಾವೆಲ್ಲ ಅನೇಕ ನಾಟಿ ವೈದ್ಯರ ಬಳಿ ತೆರಳಿ ಗಾಯಗೊಂಡಾಗ ಅರಿಶಿಣ, ಸೀತವಾದಾಗ ತುಳಸಿ, ಕರಿ ಮೆಣಸು ಉಪಯೋಗಿಸಿಕೊಂಡು ಆರೋಗ್ಯ ಸುಧಾರಿಸಿಕೊಳ್ಳುತ್ತಿದ್ದೇವು. ಇಂದು ಅನೇಕ ಹೊಸ ಹೊಸ ರೋಗಗಳು ಬರುತ್ತಿವೆ. ಅಲೋಪತಿಕ್ ಔಷಧಿಗಳಿಂದಾಗುವ ದುಷ್ಪರಿಣಾಮದಿಂದ ತಾತ್ಕಾಲಿಕ ಶಮನವಾದರೂ ಮತ್ತೆ ರೋಗ ಮರುಕಳಿಸುತ್ತದೆ. ಆದರೆ ಆಯುರ್ವೇದ ಔಷಧಿಯಿಂದ ನಿಧಾನವಾಗಿ ಕಡಿಮೆಯಾದರೂ ಮರಳು ಬರುತ್ತಿರಲಿಲ್ಲ ಎಂದರು.

ಬಾದಾಮಿ ಕಾಳಿದಾಸ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸಂಗೀತಾ ಬಳಗಾನೂರ ಅತಿಥಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಆಯುರ್ವೇದ ಮಾಹಿತಿಯುಳ್ಳ ಪೊಸ್ಟರಗಳನ್ನು ಬಿಡುಗಡೆ ಮಾಡಲಾಯಿತು. ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಆಯುಷ ಅಽಕಾರಿ ಅಕ್ಕಮಹಾದೇವಿ ಗಾಣಿಗೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಆಯುಷ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಚಂದ್ರಕಾಂತ ರಕ್ಕಸಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net