ಆಪ್ತ ಸಮಾಲೋಚನೆ ನಿಯಮಿತವಾಗಿರಲಿ

bkt-18-1
Published on

ಬಾಗಲಕೋಟೆ: ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಂದಂತಹ ಪ್ರಕರಣಗಳಿಗೆ ಸಂಬಂಧಿಸಿದ ಮಕ್ಕಳ ಪಾಲನಾ ಸಂಸ್ಥೆಗಳು ನಿಯಮಿತವಾಗಿ ಮಕ್ಕಳ ಆಪ್ತ ಸಮಾಲೋಚನೆ ಮಾಡುವಂತೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಸಮಿತಿಯ ಸದಸ್ಯರಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಜಿಲ್ಲಾ ತನಿಖಾ ಸಮಿತಿ, ಬಾಲನ್ಯಾಯ ಮಂಡಳಿ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಕ್ಕಳ ಸಹಾಯವಾಣಿ ಸಲಹಾ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳ ಆಪ್ತ ಸಮಾಲೋಚನೆ ಸಮಯದಲ್ಲಿ ಸಮಿತಿಯ ಸದಸ್ಯರು ಕಡ್ಡಾಯವಾಗಿ ಇರಬೇಕು. ಕಾಟಾಚಾರಕ್ಕೆ ಆಗಬಾರದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪಾಲನಾ ಸಂಸ್ಥೆಯಲ್ಲಿರುವ ಮಕ್ಕಳನ್ನು ಅವರ ಸಂಬಂಧಿಕರ ಮತ್ತು ತಂದೆ ಅಥವಾ ತಾಯಿಯರ ಜೊತೆ ಸಂಪರ್ಕಕ್ಕೆ ಅವಕಾಶ ನೀಡುತ್ತಿಲ್ಲವೆಂದು ಜಿಲ್ಲಾ ತನಿಖಾ ಸಮಿತಿಯ ಸದಸ್ಯರೊಬ್ಬರು ಸಭೆಯ ಗಮನಕ್ಕೆ ತಂದಾಗ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು. ಪಾಲನಾ ಸಂಸ್ಥೆಯಿಂದ ಮಕ್ಕಳನ್ನು ಬಿಡುಗಡೆ ಮಾಡುವ ಸಮಯದಲ್ಲಿ ಸಮಾಲೋಚನೆ ಮಾಡದೇ ಇರುವ ಬಗ್ಗೆ ದೂರು ಬಂದಿರುವುದಾಗಿ ಜಿಲ್ಲಾ ಕಾನೂನು ಸೇವಾ ಪ್ರಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಸಭೆಗೆ ತಿಳಿಸಿದಾಗ ಆಪ್ತ ಸಮಾಲೋಚನೆ ನಿಯಮಿತವಾಗಿ ಮಾಡಲು ಸಮಿತಿ ಸದಸ್ಯರಿಗೆ ಸೂಚಿಸಿದರು.

ಅನಾತ, ಏಕಪೋಷಕ, ಪರಿತ್ಯತ್ತ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಸೂಕ್ತ ಚಿಕಿತ್ಸೆ ಕೊಡುವ ಕಾರ್ಯವಾಗಬೇಕು. ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಚಿಕಿತ್ಸೆ ಇದ್ದರೆ ಮಾತ್ರ ಬೇರೆ ಖಾಸಗಿ ಆಸ್ಪತ್ರೆಗೆ ವರದಿ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವಂತಾಗಬೇಕು. ಕೇವಲ ವರದಿ ಮಾಡಿಕೊಂಡು ಬಂದರೆ ಸಾಲದು ಯೋಜನೆ ಸದುಪಯೋಗವಾಗುತ್ತಿರುವ ಬಗ್ಗೆ ಗಮನ ಹರಿಸುತ್ತಿರಬೇಕು ಎಂದು ತಿಳಿಸಿದರು.

ಪ್ರಗತಿ ಪರಿಶೀಲನೆಯಲ್ಲಿ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಸ್ತಗಿರಿಸಾಬ ಮುಲ್ಲಾ ವಿವಿಧ ಯೋಜನೆಗಳ ಬಗ್ಗೆ ಪ್ರಗತಿ ವಿವರದ ಮಾಹಿತಿ ನೀಡುತ್ತಾ, ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಕೋವಿಡ್‍ನಿಂದಾಗಿ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳಿಗೆ ಪ್ರತಿ ತಿಂಗಳು 3500 ರೂ.ಗಳ ಧನ ಸಹಾಯ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ 5 ಜನ ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ಪ್ರಸಕ್ತ ಸಾಲಿಗೆ ವಿಶೇಷ ಪಾಲನಾ ಯೋಜನೆಯಡಿ 595, ಪ್ರಾಯೋಜಿಕ ಕಾರ್ಯಕ್ರಮದಡಿ 234 ಜನ ಮಕ್ಕಳು ಪ್ರಯೋಜನ ಪಡೆಯುತ್ತಿದ್ದರೆ, ದತ್ತು ಕಾರ್ಯಕ್ರಮದಡಿ 2 ಮಕ್ಕಳನ್ನು ದತ್ತು ಪೂರ್ವ ಪೋಷಕತ್ವಕ್ಕೆ ನೀಡಲಾಗಿದೆ. ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ 22 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 3 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಬಾಲ ನ್ಯಾಯ ಮಂಡಳಿ ಮುಂದೆ 38 ಪ್ರಕರಣಗಳು ಬಂದಿದ್ದು, ಹೊಸದಾಗಿ 19 ಸೇರಿ ಒಟ್ಟು 57 ಪ್ರಕರಣಗಳಲ್ಲಿ 12 ಪ್ರಕರಣಗಳು ಇತ್ಯರ್ಥಗೊಂಡಿದ್ದು, 45 ಬಾಕಿ ಇರುವುದಾಗಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ, ಡಿವಾಯ್‍ಎಸ್‍ಪಿ ಪ್ರಶಾಂತ ಮನ್ನೊಳ್ಳಿ, ಜಿ.ಪಂ ಮುಖ್ಯ ಯೋಜನಾಧಿಕಾರಿ ನಿರ್ಮಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಗುಲಾಮ ನದಾಪ್, ಸದಸ್ಯರಾದ ಎಸ್.ಎಸ್.ಬೆಳಗಲಿ, ಮಕ್ಕಳ ರಕ್ಷಣಾಧಿಕಾರಿ ಕೇಶವದಾಸ, ಬಾಲಕಿಯರ ಬಾಲ ಮಂದಿರದ ಪರಿವೀಕ್ಷಣಾಧಿಕಾರಿ ಜಯಮಾಲಾ ದೊಡಮನಿ ಸೇರಿದಂತೆ ಆಯಾ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net