

ಗೋಕಾಕ: ರೈತರು ಕಷಿಯಲ್ಲಿ ಆಧುನಿಕ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ನಗರದ ತಮ್ಮ ಕಾರ್ಯಾಲಯದ ಆವರಣದಲ್ಲಿ ಕೃಷಿ ಇಲಾಖೆಯ ಸಹಾಯಧನದಲ್ಲಿ ಮಂಜೂರಾದ 9 ಕಬ್ಬು ಕಟಾವು ಯಂತ್ರಗಳನ್ನು ಸೋಮವಾರ ರೈತರಿಗೆ ವಿತರಿಸಿ ಮಾತನಾಡಿದರು.
ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಎಚ್.ಡಿ.ಕೋಳೆಕರ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 3.15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಆದರೆ ಕಬ್ಬು ಕಟಾವು ಮಾಡಲು ಗ್ಯಾಂಗ್ ಹಾಗೂ ಕೂಲಿಕಾರರನ್ನು ಹುಡುಕುವುದು ದೊಡ್ಡ ಸವಾಲವಾಗಿದೆ. 2023&24ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 141 ಅರ್ಜಿ ಸಲ್ಲಿಕೆಯಾಗಿದ್ದು, ಲಾಟರಿ ಮೂಲಕ 31 ಜನರಿಗೆ ಕಬ್ಬು ಕಟಾವು ಯಂತ್ರ ವಿತರಿಸಲಾಗಿತ್ತು. 2024&25ರಲ್ಲಿ ಒಟ್ಟು 379 ಅರ್ಜಿ ಸಲ್ಲಿಕೆಯಾಗಿದ್ದು 77 ಜನರಿಗೆ ಕಬ್ಬು ಕಟಾವು ಯಂತ್ರ ವಿತರಿಸಲಾಗಿದೆ ಎಂದರು. ಒಟ್ಟು 98 ಲ ರೂ. ಮೌಲ್ಯದ ಕಬ್ಬು ಕಟಾವು ಯಂತ್ರವನ್ನು ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿರತಸಲಾಗುತ್ತಿದೆ ಎಂದರು.
ತಾಲೂಕಿನಲ್ಲಿ 2024&25ನೇ ಸಾಲಿಗೆ 24 ಅರ್ಜಿ ಸಲ್ಲಿಕೆಯಾಗಿದ್ದು, 9 ಜನರಿಗೆ ಕಬ್ಬು ಕಟಾವು ಯಂತ್ರ ವಿತರಿಸಲಾಗಿದೆ. ಯಂತ್ರವು ಒಂದು ಗಂಟೆಗೆ 15&20 ಟನ್ ಕಬ್ಬು ಕಟಾವು ಮಾಡುತ್ತದೆ. ಒಂದು ದಿನದಲ್ಲಿ 6&8 ಎಕರೆ ಕಟಾವು ಮಾಡಬಹುದಾಗಿದೆ ಎಂದು ಹೇಳಿದರು.
ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾ, ಭೀಮಗೌಡ ಪೋಲೀಸಪಾಟೀಲ, ಸುರೇಶ ಸನದಿ, ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ ಇತರರಿದ್ದರು.