ಆಧಾರ್ ತಿದ್ದುಪಡಿಗೆ ಮಹಿಳೆಯರ ಸಾಲು

28hbd1
ಆಧಾರ್ ತಿದ್ದುಪಡಿ ಮಾಡಿಸಲು ಹಳೇಬೀಡಿನ ಅಂಚೆ ಕಚೇರಿ ಮುಂದೆ ಮಹಿಳೆಯರು ಸರತಿಯಲ್ಲಿ ಕುಳಿತಿರುವುದು.
Published on

ಹಳೇಬೀಡು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಪಡೆಯಲು ಆಧಾರ್ ತಿದ್ದುಪಡಿ ಆಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಹಳೆಬೀಡಿನ ಅಂಚೆ ಕಚೇರಿ ಎದುರು ನಸುಕಿನಲ್ಲೇ ನೂರಾರು ಮಹಿಳೆಯರು ಸಾಲುಗಟ್ಟಿ ನಿಂತಿದ್ದು ಕಂಡ ಬಂತು.

ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗಳ ಲಾಭ ಪಡೆಯಲು ಆಧಾರ್-ಮೊಬೈಲ್ ಸಂಖ್ಯೆ ಜೋಡನೆ, ತಿದ್ದುಪಡಿಗಾಗಿ ಅಂಚೆ ಕಚೇರಿಯ ಮುಂದೆ ಬೆಳಗ್ಗೆ 6 ಗಂಟೆಯಿಂದಲೇ ಬಹಳಷ್ಟು ಮಹಿಳೆಯರು ಜಮಾಯಿಸಿದ್ದರು. ಸರ್ಕಾರಿ ರಜೆ ದಿನ ಹೊರತುಪಡಿಸಿ ಮಿಕ್ಕ ದಿನಗಳಲ್ಲಿ ಆಧಾರ್ ತಿದ್ದುಪಡಿ ಮಾಡಲಾಗುತ್ತಿದೆ. ಸರ್ವರ್ ಸಮಸ್ಯೆಯಿಂದ ಪ್ರತಿದಿನ 20 ರಿಂದ 30 ಅರ್ಜಿಯನ್ನು ಮಾತ್ರ ಸ್ವೀಕರಿಸಲು ಸಾಧ್ಯವಾಗುತ್ತಿದೆ. ಇದಲ್ಲದೆ ಪದೇಪದೆ ವಿದ್ಯುತ್ ಕೈಕೊಡುತ್ತಿರುವುದು ಆಧಾರ್ ತಿದ್ದುಪಡಿಗೆ ಹಿನ್ನಡೆಯಾಗುತ್ತಿದೆ.

ಹೊಲ, ಗದ್ದೆ ಹಾಗೂ ಮನೆ ಕೆಲಸಗಳನ್ನು ಬಿಟ್ಟು ದಿನವಿಡೀ ಆಧಾರ್ ಕೇಂದ್ರದ ಮುಂದೆ ಕಾಯುವುದೇ ಜನರ ಕೆಲಸವಾಗುತ್ತಿದೆ. ಆಧಾರ್ ತಿದ್ದುಪಡಿಯಾದ ಬಳಿಕ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಮತ್ತೆ ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಸರತಿಯಲ್ಲಿ ನಿಲ್ಲಬೇಕು. ಅನ್ನಭಾಗ್ಯದ ಅಕ್ಕಿ ಅಥವಾ ಹಣ ಪಡೆಯಲು ಓಟಿಪಿ ಕಡ್ಡಾಯ ಮಾಡಲಾಗಿದೆ. ಆಧಾರ್ ಕಾರ್ಡ್ ಮಾಡಿಸಿಕೊಳ್ಳುವಾಗ ನಮ್ಮ ಬಳಿ ಮೊಬೈಲ್ ಇರಲಿಲ್ಲ. ಈಗ ನಂಬರ್ ಸೇರಿಸಲು ಗಂಟೆಗಟ್ಟಲೇ ಕಾಯಬೇಕಾಗಿದೆೆ ಎಂದು ಮಹಿಳೆಯರು ಅಳಲು ತೋಡಿಕೊಳ್ಳುತ್ತಾರೆ.

ಗೃಹಲಕ್ಷ್ಮೀ ಯೋಜನೆಯ ಅರ್ಜಿಯನ್ನು ತಾವೇ ಆನ್‌ಲೈನ್‌ನಲ್ಲಿ ಸಲ್ಲಿಸಲು ಅವಕಾಶ ನೀಡಿದರೆ ಪರಿಸ್ಥಿತಿ ಸುಧಾರಿಸುತ್ತದೆ. ಮಹಿಳೆಯರೇ ಖುದ್ದು ಹಾಜರಾಗಬೇಕಿರುವುದರಿಂದ ಅವರಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿದೆ ಎನ್ನುವುದು ಹಳೇಬೀಡು ಗ್ರಾಮ ಪಂಚಾಯಿತಿಯ ಸದಸ್ಯರ ಅಭಿಪ್ರಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net