

ಕಲಬುರಗಿ: ಅತಿವೃಷ್ಟಿ, ಅನಾವೃಷ್ಟಿ, ಬೆಳೆ ಹಾನಿ, ಸಾಲಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡು ಹಲವು ವರ್ಷಗಳಾದರೂ ಮೃತ ರೈತರ ಕುಟುಂಬಕ್ಕೆ ಪರಿಹಾರ ವಿತರಿಸದೆ ಅನ್ಯಾಯ ಮಾಡಿದ್ದು, ಕೂಡಲೇ ಬಾಕಿ ಉಳಿದಿರುವ ಪ್ರಕರಣ ಇತ್ಯರ್ಥಪಡಿಸಿ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಕಾರ್ಮಿಕರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುನೀಲ ಮಾನ್ಪಡೆ ಆಗ್ರಹಿಸಿದರು.
ರೈತರು ಆತ್ಮಹತ್ಯೆ ಅಥವಾ ಆಕಸ್ಮಿಕ ಮರಣ ಹೊಂದಿದರೆ ಎಫ್‌ಎಸ್‌ಎಲ್ ಹಾಕಲು ವಿಳಂಬ, ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ವರದಿ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ೨೦೨೧ರಿಂದ ಇದುವರೆಗೆ ಆತ್ಮಹತ್ಯೆ ಮಾಡಿಕೊಂಡ ೪೬ ರೈತರಿಗೆ ಪರಿಹಾರ ಬಾಕಿ ಉಳಿದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬರದ ಹಿನ್ನೆಯಲ್ಲಿ ಕಳೆದ ಎರಡು ವರ್ಷದಲ್ಲಿ ೮೪ ರೈತರು ಆತ್ಮಹತ್ಯೆ, ೫೫ ರೈತರ ಆಕಸ್ಮಿಕ ಮರಣ ಸೇರಿ ಒಟ್ಟು ೧೩೯ ರೈತರು ಮೃತಪಟ್ಟಿದ್ದು, ಇದರಲ್ಲಿ ಕೇವಲ ೮೬ ರೈತ ಕುಟುಂಬಕ್ಕೆ ಪರಿಹಾರ ವಿತರಿಸಲಾಗಿದೆ. ಇನ್ನುಳಿದ ೫೩ ಪ್ರಕರಣಗಳಲ್ಲಿ ಪರಿಹಾರ ಚೆಕ್ ನೀಡಬೇಕಾಗಿದೆ ಎಂದು ಹೇಳಿದರು.
ಎರಡು ವರ್ಷಗಳಲ್ಲಿ ವರದಿಯಾದ ರೈತರ ಆತ್ಮಹತ್ಯೆ ಪ್ರಕರಣಲ್ಲಿ ೧೮ ಪ್ರಕರಣ ತಿರಸ್ಕರಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಪತ್ತೆ ಹಚ್ಚಲು ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನೊಳಗೊಂಡು ರಚಿಸಲಾಗಿದ್ದ ಸಮಿತಿ ಪ್ರಕರಣಗಳನ್ನು ಪರಿಹಾರ ವಿತರಣೆ ಪ್ರಕ್ರಿಯೆಯಿಂದ ಕೈ ಬಿಟ್ಟಿದೆ ಎಂದು ದೂರಿದರು.
ಪ್ರಮುಖರಾದ ಚಂದು ಜಾಧವ್, ಶಾಂತಪ್ಪ ಪಾಟೀಲ್, ಮಹಾಲಿಂಗಪ್ಪ ಪಾಟೀಲ್, ವಿಠ್ಠಲ ಪೂಜಾರಿ, ಸೋಮಶೇಖರ ಸಿಂಗೆ ಇತರರಿದ್ದರು.