ಆತಗೂರು ಹೋಬಳಿ ಅಭಿವೃದ್ಧಿಗೆ 200 ಕೋಟಿ ರೂ.ಅನುದಾನ

25M.D.R.1
Published on

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಸಮಗ್ರ ಅಭಿವೃದ್ಧಿಗೆ ಸುಮಾರು 200 ಕೋಟಿ ರೂ.ಅನುದಾನ ತರಲಾಗಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಹೊಸಹಳ್ಳಿ ದೊಡ್ಡಿ ಹಾಗೂ ವಳೆಗೆರೆದೊಡ್ಡಿ ಗ್ರಾಮಗಳಲ್ಲಿ ಒಟ್ಟು 1.5 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ಭಾಗದ ಹಲವು ಗ್ರಾಮಗಳಲ್ಲಿ ರಸ್ತೆ, ಕೆರೆಗಳು, ಚೆಕ್ ಡ್ಯಾಮ್, ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಮತ್ತಷ್ಟು ಅನುದಾನ ತಂದು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನಗಳ ಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ನಾನು ಆಕಾಂಕ್ಷಿಯಲ್ಲ. ಆದರೆ, ತಾಲೂಕಿನಲ್ಲಿ ಪಕ್ಷದ ಮುಖಂಡರಿಗೆ ಅವಕಾಶ ಸಿಗಲಿದೆ. ರಾಜ್ಯ ಮತ್ತು ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆಯಿಲ್ಲ ಎಂದರು.

ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅನಗತ್ಯವಾಗಿ ರಾಜ್ಯ ಸರ್ಕಾರ ಮತ್ತು ಸಚಿವರನ್ನು ಟೀಕಿಸುತ್ತಿರುವುದು ಸರಿಯಲ್ಲ. ಟೀಕಿಸುವುದರಿಂದ ನಾನು ದೊಡ್ಡ ಲೀಡರ್ ಆಗುತ್ತೇನೆ ಎಂಬ ಭ್ರಮೆಯಲ್ಲಿ ಅವರಿದ್ದಾರೆ. ಜನ ಅವರನ್ನು ಜೋಕರ್ ರೀತಿ ಬಿಂಬಿಸುತ್ತಿದ್ದಾರೆ. ರಾಜಕೀಯವಾಗಿ ಅನುಭವವಿಲ್ಲದ ನಿಖಿಲ್ ಕುಮಾರ್‌ಸ್ವಾಮಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.

ಮನ್‌ಮುಲ್ ನಿರ್ದೇಶಕ ಹರೀಶ್, ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ, ತಾಪಂ ಮಾಜಿ ಅಧ್ಯಕ್ಷ ಸಿ.ನಾಗೇಗೌಡ, ಮುಖಂಡರಾದ ರಾಮಕೃಷ್ಣ, ಸಿದ್ದರಾಜು, ಕದಲೂರು ರವಿ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net