

ಕಾರವಾರ: ‘ಕೆಲವು ವಿದೇಶಗಳಲ್ಲಿ ಚಿಕಿತ್ಸೆ ನೀಡಿದ ವೈದ್ಯರಿಗೂ ಕರೊನಾ ಬಂದಿತ್ತು. ಇದರಿಂದ ಜಿಲ್ಲೆಯ ಕೋವಿಡ್ 19 ರೋಗಿಗಳ ಚಿಕಿತ್ಸೆಗಾಗಿ ನಮ್ಮನ್ನು ಆಯ್ಕೆ ಮಾಡಿದಾಗ ಒಮ್ಮೆ ಆತಂಕವಾಯಿತು. ಆದರೆ, ಇಂಥ ಸಮಯದಲ್ಲಿ ಹಿಂದೆ ಸರಿಯುವುದು ಸರಿಯಲ್ಲ. ನನ್ನ ಕರ್ತವ್ಯ ನಿಭಾಯಿಸೋಣ ಎಂದು ತೆರಳಿದೆ. ಇದೊಂದು ಉತ್ತಮ ಅನುಭವ.’
ಇದು ಕಾರವಾರ ಅರಗಾದ ನೌಕಾ ಆಸ್ಪತ್ರೆಯಲ್ಲಿ ಕರೊನಾ ರೋಗಿಗೆ ಚಿಕಿತ್ಸೆ ನೀಡಿದ ಆರೋಗ್ಯ ಇಲಾಖೆಯ ವೈದ್ಯರೊಬ್ಬರ ಅನುಭವದ ಮಾತು. ಆಶಾ ಕಾರ್ಯಕರ್ತೆಯರು, ಪೊಲೀಸರು ಮೊದಲಾದ ಕರೊನಾ ಸೇನಾನಿಗಳು ರಸ್ತೆಯಲ್ಲಿ ನಿಂತು ಕರೊನಾ ತಡೆಯುವ ಯತ್ನ ನಡೆಸುತ್ತಿದ್ದರೆ, ಜಿಲ್ಲೆಯ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವೈದ್ಯರು ಹಾಗೂ ನರ್ಸ್ಗಳ ತಂಡ ನೇರವಾಗಿ ಕರೊನಾ ರೋಗಿಯ ಸಂಪರ್ಕಕ್ಕೆ ಬಂದು, ಅವರಿಗೆ ಚಿಕಿತ್ಸೆ ನೀಡುವ ಸವಾಲಿನ ಕಾರ್ಯವನ್ನು ಮಾಡುತ್ತಿದೆ.
ನೌಕಾ ಆಸ್ಪತ್ರೆಯಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿದರೂ ಇಲ್ಲಿನ ಕ್ರಿಮ್ಸ್ನ ಏಳು ಹಾಗೂ ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐವರು ವೈದ್ಯರು ಹಾಗೂ 30ರಷ್ಟು ನರ್ಸ್ಗಳು ಜಿಲ್ಲೆಯ ಪ್ರಾಥಮಿಕ ಹಂತದ ಕರೊನಾ ರೋಗಿಗಳ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.
ನಾಲ್ಕು ದಿನಕ್ಕೆ ಇಬ್ಬರು ವೈದ್ಯರು ಹಾಗೂ ಮೂವರು ನರ್ಸ್ಗಳ ತಂಡಕ್ಕೆ ಕರೊನಾ ಚಿಕಿತ್ಸೆಗೆ ನಿಯೋಜಿಸಲಾಯಿತು. ತಂಡದ ಎಲ್ಲ ಸದಸ್ಯರೂ ನಾಲ್ಕೂ ದಿನ ನೌಕಾಸೇನೆಯ ನಿಗದಿತ ಜಾಗದಲ್ಲೇ ಉಳಿದು ಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ವೈದ್ಯರು ದಿನಕ್ಕೆರಡು ಬಾರಿ ರೋಗಿಯ ತಪಾಸಣೆಗೆ ತೆರಳಬೇಕಿತ್ತು. ನರ್ಸ್ಗಳು ನಿರಂತರವಾಗಿ ರೋಗಿಯ ಮೇಲ್ವಿಚಾರಣೆ ನೋಡಬೇಕಿತ್ತು. ಐಸೋಲೇಶನ್ ವಾರ್ಡ್ಗೆ ತೆರಳುವಾಗ ಇಡೀ ದೇಹ ಮುಚ್ಚುವ ಕವಚ ಪಿಪಿಇ ಹಾಕಬೇಕಿತ್ತು.
ಈಗ ಈ ಎಲ್ಲ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯು ಸುರಕ್ಷತೆಗಾಗಿ ತಮ್ಮ ಮಕ್ಕಳು ಹಾಗೂ ಕುಟುಂಬದಿಂದ ದೂರ ಉಳಿದು ತ್ಯಾಗ ಮಾಡಿದ್ದಾರೆ. ಈಗ ಕೆಲವರು 14 ದಿನದ ಕ್ವಾರಂಟೈನ್ ಅವಧಿಯಲ್ಲಿದ್ದು, ಕೆಲವರು ಪೂರ್ಣಗೊಳಿಸಿ ತಮ್ಮ ದೈನಂದಿನ ವೃತ್ತಿಗೆ ಹಾಜರಾಗಿದ್ದಾರೆ. ಜೀವದ ಹಂಗು ತೊರೆದು, ಸವಾಲನ್ನು ಮೆಟ್ಟಿನಿಂತು ಸೋಂಕಿನ ವಿರುದ್ಧ ಹೋರಾಟ ಅನುಪಮ, ಶ್ಲಾಘನೀಯ.
ಕರೊನಾ ಡಾಕ್ಟರ್ಸ್: ಕ್ರಿಮ್್ಸ ಆಸ್ಪತ್ರೆಯ ಡಾ. ಷರತ್, ಡಾ. ನಟರಾಜ ಬಂಟ್, ಡಾ. ಸಂದೇಶ, ಡಾ.ಹಿತೇಶ, ಡಾ. ಮೊಹಮದ್ ಹಫೀಜ್, ಡಾ. ವಿಶಾಂತ್, ಡಾ.ಗಜಾನನ, ಹಾರವಾಡ ಪ್ರಾಥಮಿಕ ಆರೋಗ್ಯ (ಪ್ರಾ.ಆ.) ಕೇಂದ್ರದ ಡಾ. ನಿತಿನ್ ಹೊಸ್ಮೇಲಕರ್, ಬಂಕಿಕೊಡ್ಲು ಪ್ರಾ.ಆ. ಕೇಂದ್ರದ ಡಾ. ಶಿವಾ ನಾಯ್ಕ, ಹೊನ್ನಾವರ ಖರ್ವಾ ಪ್ರಾ.ಆ. ಕೇಂದ್ರದ ಡಾ. ವಿವೇಕ ಭಗತ್, ಹಳಿಯಾಳ ಮುರ್ಕವಾಡ ಪ್ರಾ.ಆ. ಕೇಂದ್ರದ ಡಾ. ಭೀಮಣ್ಣ ಸಿನ್ನೂರ್, ಮಂಗಳವಾಡ ಪ್ರಾ.ಆ. ಕೇಂದ್ರದ ಡಾ. ಶಶಿಕಲಾ ಕೊಣ್ಣೂರು ಅವರು ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಭಟ್ಕಳದಲ್ಲಿ ಸವಾಲಿನ ಕಾರ್ಯ: ಜಿಲ್ಲೆಯ ಕರೊನಾ ಸೋಂಕಿನ ಕೇಂದ್ರಬಿಂದು ಭಟ್ಕಳ. ಹೀಗಾಗಿ, ಇಲ್ಲಿ ಸಾಮಾನ್ಯ ರೋಗಿಗೆ ಚಿಕಿತ್ಸೆ ನೀಡಬೇಕಾದರೂ ವೈದ್ಯರು ಎಚ್ಚರ ವಹಿಸುವುದು ಅನಿವಾರ್ಯ. ಇರುವಷ್ಟೇ ವೈದ್ಯರು ಕರೊನಾ ರೋಗಿಗಳ ಚಿಕಿತ್ಸೆ ಹಾಗೂ ಇತರ ರೋಗಿಗಳ ಚಿಕಿತ್ಸೆಯನ್ನೂ ನಿಭಾಯಿಸಬೇಕು. ಈ ಸವಾಲಿನ ಕಾರ್ಯವನ್ನು ಅಲ್ಲಿನ ತಾಲೂಕು ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದಾರೆ. ಡಾ. ಸವಿತಾ ಕಾಮತ್ ನೇತೃತ್ವದಲ್ಲಿ ಡಾ. ಲಕ್ಷ್ಮೀಶ, ಡಾ. ಸತೀಶ, ಡಾ. ಸುರಕ್ಷಿತ್ ಶೆಟ್ಟಿ, ಡಾ.ಜನಾರ್ದನ ಮೊಗೇರ, ಡಾ. ವಾಣಿ, ಡಾ. ಸ್ವಾತಿ, ಡಾ. ಅರುಣ್ ಅವರು ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಆರೋಗ್ಯ ಇಲಾಖೆ ನೋಡಲ್ ಅಧಿಕಾರಿಯಾಗಿ ಡಾ. ಷರದ್ ನಾಯಕ ಅವರನ್ನು ನೇಮಿಸಲಾಗಿದೆ. ಡಿಎಚ್ಒ ಡಾ.ಜಿ.ಎನ್.ಅಶೋಕ ಕುಮಾರ್, ಡಾ.ವಿನೋದ ಭೂತೆ ಅವರು ಸಹಕಾರ ನೀಡುತ್ತಿದ್ದಾರೆ.
ಪಿಪಿಇ ಕಿಟ್ ಹಾಕಿ ಕಾರ್ಯನಿರ್ವಹಿಸುವುದು ಸುಲಭದ ವಿಚಾರವಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಕರೊನಾ ಹರಡುವ ಸಾಧ್ಯತೆ ಇರುತ್ತದೆ. ನಮ್ಮ ವೈದ್ಯರು ಹಾಗೂ ನರ್ಸ್ಗಳು ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.- ಡಾ. ಅಮಿತ್ ಕಾಮತ್ ಕ್ರಿಮ್ಸ್ನ ತಜ್ಞ ವೈದ್ಯ
ಕಾರವಾರದಲ್ಲೇ ವೈದ್ಯರಿರುವಾಗ ಇಷ್ಟು ದೂರದಿಂದ ನಮ್ಮನ್ನೇಕೆ ಹಾಕಿದರಪ್ಪ ಎಂದು ಅನಿಸಿತ್ತು. ಆದರೂ ಕರ್ತವ್ಯ ಮರೆಯಬಾರದು ಎಂದು ತೆರಳಿದೆ. ಕಷ್ಟದ ಸಮಯದಲ್ಲಿ ಸೇವೆ ಮಾಡಿದ ಸಮಾಧಾನ ಇದೆ. ಇದೊಂದು ಹೊಸ ಅನುಭವ. ಡಾ. ಭೀಮಣ್ಣ ಸಿನ್ನೂರ್ ಮುರ್ಕವಾಡ ಪ್ರಾಆ ಕೇಂದ್ರದ ವೈದ್ಯಾಧಿಕಾರಿ
ಪ್ರಥಮ ಬಾರಿಗೆ ಕರೊನಾ ಚಿಕಿತ್ಸೆ ನೀಡುತ್ತಿರುವುದರಿಂದ ಮೊದಲ ದಿನ ಆತಂಕವಿತ್ತು. ನಂತರ ಅದು ರೂಢಿಯಾಯಿತು. ನೌಕಾ ಆಸ್ಪತ್ರೆಯಲ್ಲಿ ನಮಗೆ ಉತ್ತಮ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ಪಿಪಿಇ ಸೇರಿ ಎಲ್ಲ ಗುಣಮಟ್ಟದ ಸಲಕರಣೆ ನೀಡಲಾಗಿತ್ತು. ಕರೊನಾ ಚಿಕಿತ್ಸೆ ಹೊಸ ಅನುಭವ ನೀಡಿದೆ. ಡಾ. ಶಿವಾ ನಾಯ್ಕ ಬಂಕಿಕೊಡ್ಲು ಪ್ರಾಆ ಕೇಂದ್ರದ ವೈದ್ಯಾಧಿಕಾರಿ