‘ಆಟ’ಆಡುತ್ತಿದ್ದವರ ಮೇಲೆ ಶಿಸ್ತುಕ್ರಮ

31sirsi1a
Published on

ಶಿರಸಿ: ಕರೊನಾ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರಬರಬಾರದು ಎಂಬ ಆದೇಶವಿದ್ದರೂ ಗುಂಪು ಆಟಗಳಲ್ಲಿ ತೊಡಗಿದ್ದ ಪುಂಡರ ವಿರುದ್ಧ ಇಲ್ಲಿನ ಪೊಲೀಸರು ಡ್ರೋಣ್ ಕ್ಯಾಮರಾ ಮೂಲಕ ಕಾರ್ಯಾಚರಣೆ ನಡೆಸಿ ಶಿಸ್ತು ಕ್ರಮ ಕೈಗೊಂಡಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಸೋಮವಾರದಿಂದ ಆರಂಭಗೊಂಡ ಡ್ರೋಣ್ ಕ್ಯಾಮರಾ ಕಾರ್ಯಾಚರಣೆಯಲ್ಲಿ ಸಾಕಷ್ಟು ಜನರ ವಿರುದ್ಧ ಲಾಕ್​ಡೌನ್ ಆದೇಶ ಉಲ್ಲಂಘಿಸಿದ ಕಾರಣ ಕ್ರಮ ಕೈಗೊಳ್ಳಲಾಗಿದೆ. ನಗರದ ಪ್ರಮುಖ ಸ್ಥಳಗಳು ಸೇರಿ ಅಂಚೆ ಸರ್ಕಲ್, ಮುಸ್ಲಿಂ ಗಲ್ಲಿ, ಕೋಟೆಕೆರೆ ಬಯಲು, ಕಸ್ತೂರ್ಬಾ ನಗರ ಸೇರಿ ವಿವಿಧೆಡೆ ಡ್ರೋಣ್ ಕ್ಯಾಮರಾ ಹಾರಾಟ ನಡೆಸಲಾಗಿದೆ. ಈ ವೇಳೆ ಕೊಟೆಕೆರೆ ಮೈದಾನದಲ್ಲಿ ಕ್ರಿಕೆಟ್, ವಾಲಿಬಾಲ್, ಗುಂಪು ಆಟ ಆಡುತ್ತಿದ್ದ 25 ರಿಂದ 30 ಜನ ಹುಡುಗರನ್ನು ಗುರುತಿಸಿ ತಪ್ಪೊಪ್ಪಿಗೆ ನಾಮಫಲಕ ಹಿಡಿಸಿ ತಪ್ಪಿನ ಅರಿವು ಮೂಡಿಸಲಾಗಿದೆ. ಜತೆಗೆ ಅನಗತ್ಯ ಜನ ಸಂದಣಿ ಹೆಚ್ಚಿರುವ ಕಡೆ ಕೂಡ ಡ್ರೋಣ್ ಕ್ಯಾಮರಾ ಹಾರಿಸಿ ಜನದಟ್ಟಣೆಗೆ ಕಾರಣವಾಗುವವರನ್ನು ಚದುರಿಸುವ ಕಾರ್ಯ ಮಾಡಲಾಯಿತು.

ಕಿರಾಣಿ ಸಾಮಗ್ರಿ ಸರಬರಾಜು: ಸಹಕಾರ ಚಳವಳಿ ಗಟ್ಟಿಯಾಗಿರುವ ಇಲ್ಲಿ, ಸಹಕಾರ ಸಂಘಗಳು ವಿಪತ್ತಿನ ಸಂದರ್ಭದಲ್ಲೂ ಜನರಿಗೆ ನೆರವಿನ ಹಸ್ತ ಚಾಚುತ್ತಿವೆ. ಲಾಕ್​ಡೌನ್ ಸಂದರ್ಭದಲ್ಲಿ, ಜನರಿಗೆ ಜೀವನಾವಶ್ಯಕ ಸಾಮಗ್ರಿ ಪೂರೈಕೆಗೆ ಸಹಕಾರ ವ್ಯವಸ್ಥೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ.

ಪ್ರಮುಖ ಅಡಕೆ ವಹಿವಾಟು ಸಂಸ್ಥೆಯಾಗಿರುವ ತೋಟಗಾರ್ಸ್ ಕೋ ಆಪರೇಟಿವ್ ಸೊಸೈಟಿ (ಟಿಎಸ್​ಎಸ್), ತಾಲೂಕಿನ 13ಕ್ಕೂ ಹೆಚ್ಚು ಪ್ರಾಥಮಿಕ ಸಹಕಾರ ಸಂಘಗಳ ಮೂಲಕ ಹಳ್ಳಿಗರಿಗೆ ಕಿರಾಣಿ ಸಾಮಗ್ರಿ ಸರಬರಾಜು ಆರಂಭಿಸಿದೆ.

ಕರೊನಾ ವೈರಸ್ ನಿಯಂತ್ರಿಸಲು ಲಾಕ್​ಡೌನ್ ಇರುವ ಕಾರಣ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ಹಳ್ಳಿಗರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ದೈನಂದಿನ ಬಳಕೆಗೆ ಅವಶ್ಯವಿರುವ ಸಾಮಗ್ರಿಗಳನ್ನು ಟಿಎಸ್​ಎಸ್ ಪೂರೈಸುತ್ತದೆ. ಹೊರ ರಾಜ್ಯ, ಜಿಲ್ಲೆಗಳಿಂದ ದಿನಸಿ ಸಾಮಗ್ರಿಗಳನ್ನು ತಂದು, ಪ್ಯಾಕಿಂಗ್ ಮಾಡಿ ಕಳುಹಿಸಲಾಗಿದೆ. ಸಾಮಗ್ರಿಗಳ ಸರಬರಾಜಿಗೆ ಸಿಬ್ಬಂದಿ ತಂಡ ರಚಿಸಲಾಗಿದೆ.

ಪ್ರತಿ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಕನಿಷ್ಠ 5,000 ಜನರು ಇರುತ್ತಾರೆ. ಸಹಕಾರ ಸಂಘಗಳ ಮೂಲಕ ಜನರಿಗೆ ಅಗತ್ಯ ವಸ್ತು ತಲುಪಿಸುವುದು ಸುಲಭವಾಗುತ್ತದೆ. ತಾಲೂಕು ಆಡಳಿತ ಗುರುತಿಸಿರುವ ಗ್ರಾಮ ಪಂಚಾಯಿತಿವಾರು ದಿನಸಿ ಅಂಗಡಿಗಳಿಗೆ ಸಹ ಟಿಎಸ್​ಎಸ್ ಸಾಮಗ್ರಿಗಳನ್ನು ಒದಗಿಸುತ್ತಿದೆ. | ರವೀಶ ಹೆಗಡೆ, ಟಿಎಸ್​ಎಸ್ ವ್ಯವಸ್ಥಾಪಕ

ಪ್ರತಿದಿನ ಡ್ರೋಣ್ ಕ್ಯಾಮರಾ ಕಾರ್ಯಾಚರಣೆ ನಡೆಸಲಿದ್ದು, ಎಲ್ಲಿಯೇ ಜನಜಂಗುಳಿ ಕಂಡು ಬಂದರೂ ಅಲ್ಲಿ ಸೇರಿರುವ ಜನರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಜನರು ಮನೆಯಿಂದ ಹೊರ ಬರದೆ ಒಳಗೇ ಇರಬೇಕು.| ಜಿ.ಟಿ. ನಾಯಕ, ಡಿವೈಎಸ್​ಪಿ

ಕಿರಾಣಿ ಅಂಗಡಿಗಳಲ್ಲಿ ಪೆಟ್ರೋಲ್ ಮಾರಾಟ; ಪೊಲೀಸರು ವಿವಿಧ ರೀತಿಯ ಕ್ರಮ ಕೈಗೊಂಡರೂ ಜನರು ನಿರಾತಂಕವಾಗಿ ರಸ್ತೆಗೆ ಬರುವುದು ನಿಂತಿಲ್ಲ. ಒಂದೆಡೆ ಪೆಟ್ರೋಲ್ ವಿತರಣೆಯನ್ನು ಸಾರ್ವಜನಿಕರಿಗೆ ಸ್ಥಗಿತಗೊಳಿಸಿದರೂ ವಾಹನ ಓಡಾಟ ಕಡಿಮೆಯಾಗುತ್ತಿಲ್ಲ. ಹೀಗಾಗಿ ಪೆಟ್ರೋಲ್ ಬಳಕೆಗೆ ತುರ್ತು ಅಗತ್ಯದ ಪಾಸ್ ಪಡೆದವರ ಮೇಲೆ ಸಂಶಯ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕವಾಗಿ ಹಳ್ಳಿ ಭಾಗವಾದ ಹುಲೇಕಲ್, ವಾನಳ್ಳಿ, ಜಡ್ಡಿಗದ್ದೆ, ಹುತ್ಗಾರ, ತಾರಗೋಡ, ಭೈರುಂಬೆ, ಸೋಂದಾ ಕ್ರಾಸ್, ಸಂಪಖಂಡ ಸೇರಿ ವಿವಿಧೆಡೆ ಕಿರಾಣಿ ಹಾಗೂ ಇತರ ಅಂಗಡಿಗಳಲ್ಲಿ ಅನಾಯಾಸವಾಗಿ ಪೆಟ್ರೋಲ್ ದೊರೆಯುತ್ತಿದೆ, 1 ಲೀಟರ್​ಗೆ 125ರಿಂದ 140 ರೂ. ದರ ನಿಗದಿ ಮಾಡಲಾಗಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುವ ಜತೆ ಅಂಗಡಿ ಮಾಲೀಕರಿಗೆ ಅನಧಿಕೃತವಾಗಿ ಇಂಧನ ದಾಸ್ತಾನಿಗೆ ಯಾರು ಅವಕಾಶ ನೀಡುತ್ತಿದ್ದಾರೆ? ಪೆಟ್ರೋಲ್ ಯಾರು ಪೂರೈಸುತ್ತಿದ್ದಾರೆ? ಎಂಬ ಪ್ರಶ್ನೆ ಕಾಡತೊಡಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net