

ಬೆಳಗಾವಿ: ಜೈನ ಧರ್ಮ ಗುರು ಆಚಾರ್ಯ 108 ಕುಂಥುಸಾಗರ ಮುನಿಗಳು ಅವರ ಸಂಘದೊಂದಿಗೆ ಭಾನುವಾರ ಬೆಳಗ್ಗೆ ಬೆಳಗಾವಿ ನಗರ ಪ್ರವೇಶ ಮಾಡಿ, ಮಧ್ಯಾಹ್ನ ಕೊಲ್ಲಾಪುರಕ್ಕೆ ವಿಹಾರ ಬೆಳೆಸಿದರು.
ಈಚೆಗೆ ಶ್ರವಣಬೆಳಗೊಳ ಮತ್ತು ಸೋಂದಾಮಠದ ವಿಹಾರದಲ್ಲಿದ್ದ ಆಚಾರ್ಯ ಶ್ರೀಗಳು ಇದೀಗ ಮಹಾರಾಷ್ಟ್ರದ ಕೊಲ್ಲಾಪುರ ಪಟ್ಟಣಕ್ಕೆ ವಿಹಾರ ನಡೆಸುತ್ತಿದ್ದಾರೆ. ಈ ವಿಹಾರದ ಅಂಗವಾಗಿ ಭಾನುವಾರ ಮುನಿಗಳು ನಗರ ಪ್ರವೇಶ ಮಾಡಿದರು. ಬೆಳಗಾವಿಯ ಜೈನ ಸೇವಾ ಸಂಘದ ಯುವಕರು ಶ್ರೀಗಳನ್ನು ಹಲಗಾ ಗ್ರಾಮದಿಂದ ಬೆಳಗಾವಿಗೆ ಕರೆದುಕೊಂಡು ಬಂದರು. ಇಲ್ಲಿಯ ಧರ್ಮನಾಥ ಭವನದ ಬಳಿವಿರುವ ಧರ್ಮನಾಥ ಮಂದಿರದಲ್ಲಿ ಜೈನ ಸಮುದಾಯದವರು ಮುನಿಗಳನ್ನು ಬರಮಾಡಿಕೊಂಡರು.
ಶಾಸಕ ಅಭಯ ಪಾಟೀಲ, ಹಿರಿಯ ವಕೀಲ ರವಿರಾಜ ಪಾಟೀಲ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಕೆಪಿಸಿಸಿ ಕಾರ್ಯದರ್ಶಿ ಸುನೀಲ ಹನಮಣ್ಣವರ, ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ಅಧ್ಯಕ್ಷ ಪುಷ್ಪಕ ಹನಮಣ್ಣವರ, ಕಾರ್ಯದರ್ಶಿ ಸನ್ಮತಿ ಕಸ್ತೂರಿ, ಸಹ ಕಾರ್ಯದರ್ಶಿ ಯಲ್ಲಪ್ಪ ಮೇಲಿನಮನಿ ಮೊದಲಾದವರು ಆಚಾರ್ಯ ಶ್ರೀಗಳ ಪಾದಪೂಜೆ ನೆರವೇರಿಸಿ ಬರಮಾಡಿಕೊಂಡರು.
ನಂತರ ಶ್ರೀಗಳು ಭಗವಂತನ ಪಂಚಾಮೃತ ಅಭಿಷೇಕದ ಬಳಿಕ ಆಹಾರ ಚರ್ಯೆ ಮುಗಿಸಿಕೊಂಡು ಮಧ್ಯಾಹ್ನ ಕೊಲ್ಲಾಪುರಕ್ಕೆ ವಿಹಾರ ಕೈಗೊಂಡರು. ಈ ವೇಳೆ ಜೈನ ಸೇವಾ ಸಂಘದ ಅಧ್ಯಕ್ಷ ಸಚಿನ ಪಾಟೀಲ ಹಾಗೂ ಪದಾಧಿಕಾರಿಗಳು ಹಾಗೂ ಶ್ರಾವಕ-ಶ್ರಾವಕಿಯರು ಇದ್ದರು.