ಆಕ್ಸಿಜನ್ ಬೆಡ್​ಗೆ ಟೈಮರ್ ಅಳವಡಿಸಿ

11-hvr-01
Published on

ಹಾವೇರಿ: ರೆಮ್ೆಸಿವಿರ್ ಹಾಗೂ ಆಮ್ಲಜನಕ ಬಳಕೆ ಕುರಿತು ಆಡಿಟ್ ಮಾಡಬೇಕು. ಪ್ರತಿ ಆಕ್ಸಿಜನ್ ಬೆಡ್​ಗೆ ಟೈಮರ್ ಅಳವಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಬೆಂಗಳೂರು ವಿಕಾಸಸೌಧದಿಂದ ಜಿಲ್ಲಾಡಳಿತದೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಕೋವಿಡ್ ಸ್ಥಿತಿಗತಿ ಕುರಿತು ಸೋಮವಾರ ಸಂಜೆ ಸಭೆ ನಡೆಸಿ ಅವರು ಮಾತನಾಡಿದರು. ವೈದ್ಯರ ಸಲಹೆಯಂತೆ ಅಗತ್ಯ ಸಮಯದವರೆಗೆ ರೋಗಿಗಳಿಗೆ ಆಮ್ಲಜನಕ ಪೂರೈಸಲು ಪ್ರತಿ ಆಕ್ಸಿಜನ್ ಬೆಡ್​ಗೆ ಟೈಮರ್ ಅಳವಡಿಸಬೇಕು. ಒಬ್ಬ ರೋಗಿಗೆ ಎಷ್ಟು ಗಂಟೆ ಆಕ್ಸಿಜನ್ ಬೇಕು ಎಂದು ವೈದ್ಯರು ಸಮಯ ನಿಗದಿಗೊಳಿಸಿ ಟೈಮರ್ ಅಳವಡಿಸಬೇಕು. ಆನಂತರ ಸ್ವಯಂಚಾಲಿತವಾಗಿ ಅಲಾರಾಂ ಆಗಬೇಕು. ಆಗ ವೈದ್ಯರು ತಪಾಸಣೆ ಮಾಡಿ ಆಕ್ಸಿಜನ್ ಪೂರೈಕೆ ಅವಶ್ಯಕತೆ ಇದ್ದರೆ ಮುಂದುವರಿಸಲಿ, ಇಲ್ಲವಾದರೆ ಸ್ಥಗಿತಗೊಳಿಸಬೇಕು. ಇದರಿಂದ ಅನಗತ್ಯ ಆಕ್ಸಿಜನ್ ನೀಡುವುದನ್ನು ತಪ್ಪಿಸಬಹುದು. ಈ ಪ್ರಯೋಗವನ್ನು ರಾಜ್ಯದಲ್ಲಿ ಮೊದಲನೆಯದಾಗಿ ಜಿಲ್ಲೆಯಲ್ಲಿ ಆರಂಭಿಸಬೇಕು ಎಂದರು.

ರಾಣೆಬೆನ್ನೂರನಲ್ಲಿ ಹೆಚ್ಚು ಬಳಕೆ: ರಾಣೆಬೆನ್ನೂರಲ್ಲಿ ರೆಮ್ೆಸಿವಿರ್, ಆಕ್ಸಿಜನ್ ಸಿಲಿಂಡರ್ ಖಾಸಗಿಯಾಗಿ ಹೆಚ್ಚು ಪೂರೈಕೆಯಾಗುತ್ತಿರುವ ಕುರಿತು ದೂರುಗಳು ಬರುತ್ತಿವೆ. ಈ ಕುರಿತು ಎರಡನೇ ಅಲೆಯ ಮೊದಲ ದಿನದಿಂದ ಇಂದಿನವರೆಗೆ ತಾಲೂಕಾಸ್ಪತ್ರೆಗೆ ದಾಖಲಾದ ಕೋವಿಡ್ ರೋಗಿಗಳು, ರೆಮ್ೆಸಿವಿರ್, ಆಮ್ಲಜನಕ ಪೂರೈಕೆ, ಚಿಕಿತ್ಸೆ ಕುರಿತು ಅಡಿಟ್ ಮಾಡಿ ವರದಿ ಸಲ್ಲಿಸಬೇಕು. ರಾಣೆಬೆನ್ನೂರ ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ವೈದ್ಯರು ಏನು ಮಾಡುತ್ತಿದ್ದಾರೆ? ಇದೇ ಪರಿಸ್ಥಿತಿ ಮುಂದುವರಿದರೆ ನಾನು ಸುಮ್ಮನಿರಲ್ಲ. ಅಮಾನತಿಗೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹೋಂ ಐಸೋಲೇಷನ್​ನಲ್ಲಿರುವ ರೋಗಿಗಳ ಬಗ್ಗೆ ಪೂರ್ಣ ಅಡಿಟ್ ಮಾಡಿ, ಲಕ್ಷಣ ಹೊಂದಿದವರು-ಲಕ್ಷಣ ರಹಿತರನ್ನು ಪಟ್ಟಿ ಮಾಡಿ ಮನೆಯಲ್ಲಿ ಸೌಲಭ್ಯ ಇಲ್ಲದವರನ್ನು ಆಸ್ಪತ್ರೆಗೆ ದಾಖಲಿಸಿ. ಮನೆಯಲ್ಲಿ ಇರಿಸಿದವರ ಮೇಲೆ ನಿಗಾ ವಹಿಸಿ. ಸರ್ಕಾರದಿಂದಲೇ ಔಷಧ ಕಿಟ್ ನೀಡಬೇಕು ಎಂದರು.

ಶಿಗ್ಗಾಂವಿ, ಬ್ಯಾಡಗಿ, ಹಾನಗಲ್ಲ ತಾಲೂಕು ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿದ ಸಚಿವರು, ಹಾನಗಲ್ಲ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್​ಗಳ ಸಂಖ್ಯೆ ಹೆಚ್ಚಿಸುವಂತೆ ಸೂಚಿಸಿದರು. ಕೋವಿಡ್ ಆರೈಕೆ ಕೇಂದ್ರಗಳಲ್ಲಿ 7ರಿಂದ 8 ದಿನ ಪೂರೈಸಿದವರ ತಪಾಸಣೆ ನಡೆಸಿ ಗುಣವಾದವರನ್ನು ಹೋಂ ಐಸೋಲೇಷನಗೆ ಕಳುಹಿಸಿ. ತಹಸೀಲ್ದಾರರು ಆಸ್ಪತ್ರೆಗಳಿಗೆ ಹೋಗಿ ಪರಿಶೀಲಿಸಿ ಪಕ್ಕಾ ಮಾಹಿತಿ ಪಡೆಯಬೇಕು ಎಂದರು.

ಜಿಲ್ಲೆಗೆ 1,186 ವೈಯಲ್ ರೆಮ್ೆಸಿವಿರ್: ತಕ್ಷಣದಿಂದಲೇ ಜಿಲ್ಲೆಯ ಸರ್ಕಾರಿ, ಖಾಸಗಿ ಆಸ್ಪತ್ರೆಗೆ 1,186 ವೈಯಲ್ ರೆಮ್ೆಸಿವಿರ್, ಸಿಎಸ್​ಆರ್ ಫಂಡ್​ನಲ್ಲಿ ಜಿಲ್ಲೆಗೆ 100 ಆಕ್ಸಿಜನ್ ಕಾನ್ಸಂಟ್ರೆಟರ್, 294 ಜಂಬೋ ಸಿಲಿಂಡರ್ ಪೂರೈಸಲಾಗುವುದು. ಜಿಂದಾಲ್​ನಿಂದ ಆಕ್ಸಿಜನ್ ಟ್ಯಾಂಕರ್ ಬಂದಿದೆ. ಆಕ್ಸಿಜನ್, ರೆಮ್ೆಸಿವಿರ್ ಸೇರಿ ಕೋವಿಡ್ ಚಿಕಿತ್ಸೆಗೆ ಯಾವುದೇ ಕೊರತೆಯಾದರೆ ತಕ್ಷಣ ಸಂರ್ಪಕಿಸುವಂತೆ ಜಿಲ್ಲಾಡಳಿತಕ್ಕೆ ಸಚಿವರು ಸೂಚಿಸಿದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಸಿಇಒ ಮಹಮ್ಮದ್ ರೋಷನ್, ಎಸ್ಪಿ ಕೆ.ಜಿ. ದೇವರಾಜ, ಅಪರ ಜಿಲ್ಲಾಧಿಕಾರಿ ವಿನೋದಕುಮಾರ ಹೆಗ್ಗಳಗಿ, ಪ್ರಭಾರ ಡಿಎಚ್​ಒ ಡಾ. ಎಂ. ಜಯಾನಂದ ಇತರರಿದ್ದರು.

ಲಾಠಿ ಎತ್ತಬೇಡಿ

ಕೋವಿಡ್ ಸೆಮಿ ಲಾಕ್​ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ. ಯಾರ ಮೇಲೂ ಲಾಠಿ ಪ್ರಯೋಗ ಮಾಡಬೇಡಿ ಎಂದು ಎಸ್ಪಿ ಕೆ.ಜಿ. ದೇವರಾಜ ಅವರಿಗೆ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net