ಆಂಬುಲೆನ್ಸ್​ನಲ್ಲಿ ಅನಗತ್ಯ ಓಡಾಟ

26-RNR-03
Published on

ರಾಣೆಬೆನ್ನೂರ: ಖಾಸಗಿ ಆಂಬುಲೆನ್ಸ್​ನಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಮೂವರನ್ನು ಇಲ್ಲಿಯ ಬಸ್ ನಿಲ್ದಾಣದ ಬಳಿ ಪೊಲೀಸರು ತಡೆದು, ಅಂಬುಲೆನ್ಸ್ ವಶಕ್ಕೆ ಪಡೆದಿದ್ದಾರೆ.

ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ಶ್ರೀನಿವಾಸ ಸಂಜೀವಿನಿ ಮಕ್ಕಳ ಆಸ್ಪತ್ರೆ ಎಂಬ ಹೆಸರಿನ ಆಂಬುಲೆನ್ಸ್​ನಲ್ಲಿ ಚಾಲಕ ಸೇರಿ ಮೂವರು ರಾಣೆಬೆನ್ನೂರಿನಿಂದ ಹಗರಿಬೊಮ್ಮನಹಳ್ಳಿ ಕಡೆಗೆ ಹೊರಟಿದ್ದರು.

ಆಂಬುಲೆನ್ಸ್​ನಲ್ಲಿ ರೋಗಿ ಇಲ್ಲದ ಕಾರಣ ಚಕ್​ಪೋಸ್ಟ್​ನಲ್ಲಿ ಪೊಲೀಸರು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಮೂವರು ಯಾವುದೇ ದಾಖಲೆ ಪ್ರದರ್ಶಿಸಿಲ್ಲ. ಸ್ಥಳಕ್ಕೆ ತಹಸೀಲ್ದಾರ್ ಬಸನಗೌಡ ಕೋಟೂರ ಭೇಟಿ ನೀಡಿ, ‘ವಾಹನ ಹಾಗೂ ನಿಮ್ಮ ಆಸ್ಪತ್ರೆಯ ದಾಖಲಾತಿ ತೋರಿಸಿ, ದಾಖಲಾತಿ ಸರಿಯಿದ್ದರೆ ಮೂವರಿಗೂ ಪಾಸ್ ನೀಡಲಾಗುವುದು. ನಂತರ ಹಗರಿಬೊಮ್ಮನಹಳ್ಳಿಗೆ ಹೋಗಬಹುದು’ ಎಂದು ತಾಕೀತು ಮಾಡಿದರು. ಅಲ್ಲಿಯವರೆಗೆ ವಾಹನವನ್ನು ವಶದಲ್ಲಿಟ್ಟುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net