ಆಂಬುಲೆನ್ಸ್ ಸಿಗದೆ ಪಾಲಕರ ಪರದಾಟ

ambulance
Published on

ಅನಾರೋಗ್ಯ ಪೀಡಿತ ಪುತ್ರಿಯನ್ನು ಬೆಂಗಳೂರಿಗೆ ಸಾಗಿಸಲು ಹರಸಾಹಸ


ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಬೆಂಗಳೂರಿನ ಆಸ್ಪತ್ರೆಗೆ ತುರ್ತಾಗಿ ದಾಖಲಿಸಲು ಸಕಾಲದಲ್ಲಿ ಆಂಬುಲೆನ್ಸ್ ಸಿಗದೆ ಪಾಲಕರು ಆತಂಕದಲ್ಲಿ ಪರದಾಡಿದ ಪ್ರಸಂಗ ವರದಿಯಾಗಿದ್ದು, ಆರೋಗ್ಯ ಇಲಾಖೆ ನಿರ್ಲಕ್ಷ್ಯ ಧೋರಣೆಗೆ ಆಕ್ರೋಶ ವ್ಯಕ್ತವಾಗಿದೆ.
ಇಲ್ಲಿನ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ಗೌರಿಬಿದನೂರು ತಾಲೂಕಿನ ಹಳೇಹಳ್ಳಿಯ ಬಾಲಕಿಯನ್ನು ಮೂರ್ಛೆ ಸಮಸ್ಯೆಯಿಂದ ಶನಿವಾರ ಕರೆದುಕೊಂಡು ಬಂದಿದ್ದು, ಗಂಟೆಗಟ್ಟಲೇ ಕಾದರೂ ವೈದ್ಯರು ಮತ್ತು ಸಿಬ್ಬಂದಿ ಕ್ಯಾರೆ ಎಂದಿಲ್ಲ. ಕೊನೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ತುರ್ತಾಗಿ ದಾಖಲಿಸಲು ಶಿಫಾರಸು ಮಾಡಿದ್ದಾರೆ. ಆದರೆ, ಆಂಬುಲೆನ್ಸ್ ಬಂದಿಲ್ಲ. 108ಕ್ಕೆ ಕರೆ ಮಾಡಿದಾಗ ಆಕ್ಸಿಜನ್ ಇಲ್ಲದ ವಾಹನ ಇದೆ. ಇದರಲ್ಲಿ ತೆರಳಲು ಸಾಧ್ಯವೇ? ಆಕ್ಸಿಜನ್ ಇರುವ ವಾಹನಕ್ಕೆ ಕಾಯಬೇಕು ಎಂಬ ಸಬೂಬು ಹೇಳಿ ನುಣುಚಿಕೊಂಡಿದ್ದಾರೆ.

ನೀತಿಸಂಹಿತೆ ಅಡ್ಡಿ
ಚಿಕ್ಕಬಳ್ಳಾಪುರದಲ್ಲಿ ಜನರ ಅನುಕೂಲಕ್ಕಾಗಿ ಕ್ಷೇತ್ರದ ಶಾಸಕರು ಸೇರಿ ಕೆಲ ದಾನಿಗಳು ರೋಗಿಗಳಿಗೆ ಆಸ್ಪತ್ರೆಗೆ ತೆರಳಲು ಆಂಬುಲೆನ್ಸ್ ಒದಗಿಸಿದ್ದಾರೆ. ಆದರೆ, ಇದರ ಬಳಕೆಗೆ ನೀತಿಸಂಹಿತೆ ಅಡ್ಡಿಯಾಗಿದೆ. ಕಳೆದ ಏ.16ರಿಂದಲೂ ಅವಕಾಶ ನೀಡಿಲ್ಲ. ಅನುಮತಿಗಾಗಿ ಜೂ.6ರವರೆಗೆ ಕಾಯಬೇಕಾಗಿದೆ. ‘ದೇವರು ವರ ಕೊಟ್ಟರೂ ಪೂಜಾರಿ ಬಿಡ’ ಎನ್ನುವಂತೆ ದಾನಿಗಳು ಬಡ ಜನರಿಗೆ ಉಚಿತ ಸೇವೆ ಒದಗಿಸಲು ಮುಂದಾಗುತ್ತಿದ್ದರೂ ಕಾನೂನು ನಿಯಮಗಳು ಅಡ್ಡಿಯಾಗಿವೆ. ಮತ್ತೊಂದೆಡೆ ಸರ್ಕಾರದ ಅನುದಾನದಲ್ಲಿ ಸಿಗುವ ಸವಲತ್ತುಗಳನ್ನು ತಲುಪಿಸಲು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

ಅಸಡ್ಡೆ ಧೋರಣೆಗೆ ಆಕ್ರೋಶ
ಸ್ಥಳೀಯ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ಸಮರ್ಪಕವಾಗಿ ಗಮನಹರಿಸದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ಅಸಡ್ಡೆ ಧೋರಣೆ ಕಂಡು ಬರುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಆಸ್ಪತ್ರೆಗೆ ವೃದ್ಧರು, ಅಸ್ವಸ್ಥರು ಬಂದು ಪರದಾಡುತ್ತಿದ್ದರೂ ವೀಲ್‌ಚೇರ್ ನೀಡುವುದಿಲ್ಲ. ಹಾಗೆಯೇ ಸೌಕರ್ಯದ ಕೊರತೆಯ ಮಾತಿನಲ್ಲಿ ಗಂಟೆಗಟ್ಟಲೇ ಕಾಲಹರಣ ಮಾಡಲಾಗುತ್ತದೆ ಎಂಬ ಆರೋಪ ಕೇಳಿ ಬರುತ್ತವೆ.

ಸ್ಥಳೀಯರ ಕಸರತ್ತು
ಬಾಲಕಿಯ ಪರಿಸ್ಥಿತಿಯನ್ನು ನೋಡಿದ ಸ್ಥಳೀಯರು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ಜಿಲ್ಲಾ ರಕ್ತನಿಧಿ ಕೇಂದ್ರದ ಕಾರ್ಯದರ್ಶಿ ರವಿ ಅವರ ಮೂಲಕ ಆಂಬುಲೆನ್ಸ್ ಕರೆಸಿಕೊಂಡು ಬೆಂಗಳೂರಿಗೆ ಕಳುಹಿಸಿದ್ದಾರೆ.

ಮೂರ್ಛೆ ಸಮಸ್ಯೆಯಿಂದ ನಿತ್ರಾಣಗೊಂಡಿದ್ದ ಬಾಲಕಿಯನ್ನು ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ಸಮರ್ಪಕ ಸ್ಪಂದನೆ ಸಿಗಲಿಲ್ಲ. ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ಸೇವೆ ಪಡೆಯಲು ಪರದಾಡಬೇಕಾಯಿತು. ಕೊನೆಗೆ ಬೇರೆಯವರ ಮೂಲಕ ಶಿಫಾರಸು ಮಾಡಿದ ನಂತರ ಕೆಲಸವಾಯಿತು. ಅಧಿಕಾರಿಗಳಿಗೆ ಮಾನವೀಯತೆ ಬೇಡವೇ?
- ಮಂಜುನಾಥ್ ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net